ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಕನ್ನಡ ಕಿರುತೆರೆ ನಟಿ
ಬೆಂಗಳೂರು, ಜೂ.1: ಕನ್ನಡ ಚಿತ್ರರಂಗದ ಕಿರುತೆರೆ ನಟಿಯೊಬ್ಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೇ 29ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಂದನಾ(29) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ನಟಿ. ನಗರದ ತಾವರೆಕೆರೆ ಕೃಷ್ಣಮೂರ್ತಿ ಲೇಔಟ್ ನಿವಾಸಿ ಚಂದನಾ, ಸೋಮವಾರ ಮುಂಜಾನೆ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಬಳಿಕ, ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ಚಂದನಾ, ತನ್ನ ಪ್ರಿಯಕರ ದಿನೇಶ್ ಎಂಬಾತ ದೈಹಿಕವಾಗಿ ಬಳಸಿಕೊಂಡು, ಹಣ ವಸೂಲಿ ಮಾಡಿದ್ದ. ತದನಂತರ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಘಟನೆ ಬಳಿಕ ದಿನೇಶ್ ತಲೆಮರೆಸಿಕೊಂಡಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಸುದ್ದಗುಂಟೆ ಠಾಣಾ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
Next Story