ಬೆಂಗಳೂರು: ಸಿಐಡಿ, ಲೋಕಾಯುಕ್ತ ಕಚೇರಿ ಸೀಲ್ಡೌನ್
ಬೆಂಗಳೂರು, ಜು.1: ಪ್ರಮುಖ ತನಿಖಾ ಸಂಸ್ಥೆಗಳಾದ ಸಿಐಡಿ ಮತ್ತು ಲೋಕಾಯುಕ್ತ ಸಂಸ್ಥೆಯ ಕೆಲ ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಹಿನ್ನೆಲೆ ತಾತ್ಕಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ.
ನಗರದ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಹಾಗೂ ಮಹಿಳಾ ಸಿಬ್ಬಂದಿಗೆ ಸೋಂಕು ದೃಢವಾಗುತ್ತಿದ್ದಂತೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮೂವರನ್ನು ನಿಗದಿತ ಆಸ್ಪತ್ರೆಯೊಂದರಲ್ಲಿ ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸುವ ಕೆಲಸ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಬಳಿಕ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುವುದು. ಮುಂಜಾಗ್ರತ ಕ್ರಮವಾಗಿ ಸಿಐಡಿ ಕಚೇರಿ ಪೂರ್ತಿ ಸ್ಯಾನಿಟೈಸ್ ಮಾಡಿ ಮೂರು ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಕಾಯುಕ್ತ: ಅದೇ ರೀತಿ, ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ಪಿ) ಸಿಬ್ಬಂದಿಗೆ ಕೊರೋನ ಸೋಂಕು ಕಂಡು ಬಂದಿದ್ದು, ಕೂಡಲೇ ಇಬ್ಬರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಕಚೇರಿಗೆ ರಾಸಾಯನಿಕ ಸಿಂಪಡಿಸಿ ಎರಡು ದಿನ ಸೀಲ್ಡೌನ್ ಮಾಡಲಾಗಿದೆ.
24 ಗಂಟೆಯೊಳಗೆ 11 ಪೊಲೀಸರಿಗೆ ಕೊರೋನ ಸೋಂಕು ದೃಢ
ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನದಲ್ಲಿ ಸೋಂಕಿತ ಪೊಲೀಸರ ಸಂಖ್ಯೆ ಹನ್ನೊಂದಕ್ಕೆ ಏರಿಕೆಯಾಗಿದೆ. ಇಲ್ಲಿನ ಉಪ್ಪಾರಪೇಟೆ ಸಂಚಾರ ಠಾಣೆಯ ಇಬ್ಬರು, ನಗರ ಪಶ್ಚಿಮ ವಿಭಾಗದ ಸಿಎಆರ್ ನ ಓರ್ವ ಕಾನ್ಸ್ ಟೇಬಲ್, ಕಾಟನ್ ಪೇಟೆ ಠಾಣೆಯ ಹೆಡ್ ಕಾನ್ಸ್ ಟೇಬಲ್, ರಾಜ್ಯ ಅಪರಾಧ ದಾಖಲಾತಿ ವಿಭಾಗದ (ಎಸ್ಸಿಆರ್ಬಿ) ನಾಲ್ವರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.