ರಾಜ್ಯದಲ್ಲಿ ನಿಯಂತ್ರಣಕ್ಕೆ ಬಾರದ ಕೋವಿಡ್19: ಒಂದೇ ದಿನ 2,313 ಮಂದಿಗೆ ಪಾಸಿಟಿವ್, 57 ಬಲಿ
ಬೆಂಗಳೂರಿನಲ್ಲಿ ಮುಂದುವರಿದ ಸಾವಿನ ಸರಣಿ; ಮತ್ತೆ 29 ಮಂದಿ ಸಾವು
ಬೆಂಗಳೂರು, ಜು.10: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಕೆಲ ದಿನಗಳಿಂದ ದೈನಂದಿನ 2 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆವರೆಗೆ ಮತ್ತೆ 2,313 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 33,418 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 57 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 29 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 8, ಮೈಸೂರು 4, ಬೀದರ್ 3, ಗದಗ 2, ಚಿಕ್ಕಬಳ್ಳಾಪುರ 2, ಕಲಬುರಗಿ 2, ಧಾರವಾಡ 2, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು, ಉತ್ತರ ಕನ್ನಡ, ರಾಯಚೂರು ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1,447, ದಕ್ಷಿಣ ಕನ್ನಡ 139, ವಿಜಯಪುರ 89, ಬಳ್ಳಾರಿ 66, ಕಲಬುರಗಿ 58, ಯಾದಗಿರಿ 51, ಮೈಸೂರು 51, ಧಾರವಾಡ 50, ಹಾವೇರಿ 42, ಉಡುಪಿ 34, ಉತ್ತರ ಕನ್ನಡ 33, ಕೊಡಗು 33, ಮಂಡ್ಯ 31, ರಾಯಚೂರು 25, ರಾಮನಗರ 23, ದಾವಣಗೆರೆ 21, ಬೀದರ್ 19, ಗದಗ 19, ಬೆಳಗಾವಿ 15, ಚಿಕ್ಕಬಳ್ಳಾಪುರ 12, ತುಮಕೂರು 10, ಚಾಮರಾಜನಗರ 9, ಕೋಲಾರ 9, ಕೊಪ್ಪಳ 7, ಶಿವಮೊಗ್ಗ 6, ಹಾಸನ 6, ಬಾಗಲಕೋಟೆ 6, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 1 ಪ್ರಕರಣ ಪಾಸಿಟಿವ್ ಬಂದಿದೆ.
ರಾಜ್ಯಾದ್ಯಂತ ಶುಕ್ರವಾರ 19,228 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 16,473 ಮಾದರಿಗಳು ನೆಗೆಟಿವ್ ಬಂದಿದೆ. ಒಟ್ಟಾರೆ ರಾಜ್ಯದಲ್ಲಿ 33,418 ಕೊರೋನ ಸೋಂಕಿತರ ಪೈಕಿ 13,836 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 1,003 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 543 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 19,035 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 472 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.