ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡಿ: ಕಾರ್ಖಾನೆಗಳಿಗೆ ಸಚಿವ ಜಗದೀಶ್ ಶೆಟ್ಟರ್ ಸೂಚನೆ
ಬೆಂಗಳೂರು, ಆ.8: ಕೊರೋನ ಸಾಂಕ್ರಾಮಿಕ ಪಿಡುಗಿನಿಂದ ಕಾರ್ಮಿಕರ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತೆ ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೂಚಿಸಿದ್ದಾರೆ.
ಬೆಂಗಳೂರು ಬಳಿಯ ಬಿಡದಿಯ ಕೋಕೊ ಕೋಲಾ ಫ್ಯಾಕ್ಟರಿಗೆ ಭೇಟಿ ನೀಡಿ ಮಾತನಾಡಿದ ಅವರು, ಕೊರೋನ ಸಾಂಕ್ರಾಮಿಕ ರೋಗ ಎಲ್ಲಾ ಕ್ಷೇತ್ರ ಹಾಗೂ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ದೇಶ ಹಾಗೂ ರಾಜ್ಯದ ಆರ್ಥಿಕತೆಯ ಗಾಲಿ ಮುಂದೆ ಸಾಗಲು ಕೈಗಾರಿಕಾ ಕ್ಷೇತ್ರದ ತನ್ನ ಕಾರ್ಯ ಆರಂಭ ಮಾಡಬೇಕಾಗಿರುವುದು ಅನಿವಾರ್ಯ ಎಂದರು.
ಇದನ್ನು ಮನಗೊಂಡು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಲಾಕ್ ಡೌನ್ ಸಡಿಲಿಕೆ ಮಾಡಿದೆ. ಆದರೆ, ಕೊರೋನ ಮಹಾಮಾರಿಯ ತೊಂದರೆ ಇನ್ನು ತಪ್ಪಿಲ್ಲ. ಕೊರೋನ ಜೊತೆಯಲ್ಲಿಯೇ ಬದುಕಲು ನಾವು ಕಲಿತುಕೊಳ್ಳಬೇಕಾಗಿದೆ. ಸುರಕ್ಷಿತ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಯನ್ನು ನಮ್ಮ ಬದುಕಿನ ಕರ್ತವ್ಯಗಳಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಕಾರ್ಮಿಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ಮೂಲಕ ಕಾರ್ಖಾನೆಗಳು ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು. ಕಾರ್ಮಿಕರುಗಳಿಗೆ ಅಗತ್ಯವಿರುವ ಸುರಕ್ಷತಾ ಸೌಲಭ್ಯಗಳನ್ನು ಕಾರ್ಖಾನೆ ಆಡಳಿತ ಮಂಡಳಿ ಒದಗಿಸುವ ಮೂಲಕ ಕಾರ್ಖಾನೆಯ ಕೆಲಸಗಳು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕೋಕೊ ಕೋಲಾ ಫ್ಯಾಕ್ಟರಿಯಲ್ಲಿ ಅಳವಡಿಸಿಕೊಂಡಿರುವ ಸುರಕ್ಷತೆಯ ಕ್ರಮಗಳನ್ನು ಪರಿಶೀಲಿಸಿದರು. ಇದೇ ವೇಳೆ ಕೊಕೋ ಕೋಲಾ ಕಂಪನಿಯ ಆವರಣದಲ್ಲಿ ಸಚಿವರ ಭೇಟಿಯ ನೆನಪಿಗೆ ಗಿಡವನ್ನು ನೆಡಲಾಯಿತು.