ಬೆಂಗಳೂರು: ಉಚಿತವಾಗಿ 300ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಶವಸಂಸ್ಕಾರ ಮಾಡಿದ ಮರ್ಸಿ ಏಂಜಲ್ಸ್ ತಂಡ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.9: ಐಟಿಬಿಟಿ, ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೆಳೆಯರ ಬಳಗವೊಂದು ಮರ್ಸಿ ಏಂಜಲ್ಸ್ ಎಂಬ ಹೆಸರಿನ ತಂಡವನ್ನು ಕಟ್ಟಿಕೊಂಡು 300ಕ್ಕೂ ಹೆಚ್ಚು ಕೊರೋನ ಸೋಂಕಿತರ ಶವಸಂಸ್ಕಾರವನ್ನು ಉಚಿತವಾಗಿ ನೆರವೇರಿಸಿದೆ.
ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹಡುತ್ತಿರುವ ಹಿನ್ನೆಲೆ ಕೊರೋನ ಸೋಂಕಿನಿಂದ ಮೃತರಾದವರನ್ನು ಅಂತ್ಯಸಂಸ್ಕಾರ ಮಾಡಲು ಸಿಬ್ಬಂದಿ ಹುಡುಕಾಡುವುದು ಹಾಗೂ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಇರುವ ಸಂದರ್ಭದಲ್ಲಿ ಮರ್ಸಿ ಏಂಜಲ್ಸ್ ತಂಡ ನೆರವಾಗುತ್ತಿದ್ದು, ಆಸ್ಪತ್ರೆ, ಆಂಬ್ಯುಲೆನ್ಸ್ ಸಿಬ್ಬಂದಿಯಿಂದ ಮಾಹಿತಿ ಪಡೆದು ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಕೊರೋನ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸುತ್ತಿರುವ ಗೆಳೆಯರು ಕೋವಿಡ್ ಪ್ರೋಟೋಕಾಲ್ ಪ್ರಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಹಾಗೂ ತಜ್ಞರ ಮಾರ್ಗದರ್ಶನದಲ್ಲೇ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಇದಲ್ಲದೆ, ಶವ ಸಂಸ್ಕಾರದ ವೆಚ್ಚವನ್ನೂ ಇವರೇ ಭರಿಸುತ್ತಾರೆ. ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.