ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣ: ಶಂಕಿತನ ವಿಚಾರಣೆ
ಬೆಂಗಳೂರು, ಸೆ.28: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಸಂಗೀತ್ ದಂತಕುಡಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇಲ್ಲಿನ ಸದಾಶಿವನಗರದಲ್ಲಿ ಸಿಸಿಬಿ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈತ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮತ್ತು ರಾತ್ರಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಮತ್ತೇ ವಿಚಾರಣೆ: ಈಗಾಗಲೇ ಬಂಧಿತನಾಗಿರುವ ವಿರೇನ್ ಖನ್ನಾ ಸೇರಿದಂತೆ 10 ಮಂದಿ ಆರೋಪಿಗಳ ಜೊತೆ ಗುರುತಿಸಿಕೊಂಡಿದ್ದ ವಸ್ತ್ರ ವಿನ್ಯಾಸಕ ರಮೇಶ್ ದೆಂಬುಲಾ ಎಂಬಾತನನ್ನು ಕಳೆದ ಶನಿವಾರ ಇಡೀ ದಿನ ಸಿಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಇದೀಗ ಮತ್ತೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Next Story