ಬಹುಕೋಟಿ ಮೌಲ್ಯದ ನಿಷೇಧಿತ ಟರ್ಕಿ ಕರೆನ್ಸಿ ವಶ: ಎಂಟು ಮಂದಿಯ ಬಂಧನ
ಒಂಬತ್ತು ಮೊಬೈಲ್ ಫೋನ್, ಎರಡು ಕಾರು, ಒಂದು ದ್ವಿಚಕ್ರ ವಾಹನ ವಶ
ಬೆಂಗಳೂರು, ಅ.16: ಭಾರೀ ಕಾರ್ಯಾಚರಣೆಯೊಂದನ್ನು ನಡೆಸಿದ ಬೆಂಗಳೂರು ಸಂಜಯ ನಗರ ಪೊಲೀಸರು ನಿಷೇಧಿತ ಟರ್ಕಿ ದೇಶದ ಕರೆನ್ಸಿಯನ್ನು ಅಕ್ರಮವಾಗಿ ಭಾರತೀಯ ಹಣಕ್ಕೆ ವಿನಿಮಯ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ.
ಈ ಸಂಬಂಧ ಎಂಟ ಮಂದಿಯನ್ನು ಬಂಧಿಸಿದ್ದು, ಬಹುಕೋಟಿ ವೌಲ್ಯದ ಟರ್ಕಿ ಕರೆನ್ಸಿ ‘ಲಿರಾ’ ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ಪುರಂನ ಕಿತಗನೂರು ನಿವಾಸಿ ಮೋಹನ್ಕುಮಾರ್, ಅನಂದಪುರ ಎಸ್.ಬಿ.ಐ. ಲೇಔಟ್ ನಿವಾಸಿ ಅಂತೋಣಿರಾಜ್, ಲಿಂಗರಾಜಪುರಂನ ಕೆಎಸ್ಎಫ್ಸಿ ಲೇಔಟ್ ನಿವಾಸಿ ಯೂಜಿನ್ ಪ್ರಭು, ವಿಜಯನಗರ ಟೆಲಿಕಾಂ ಲೇಔಟ್ನ ಶಿವಯೋಗಿ, ಇಸ್ರೋ ಲೇಔಟ್ನ ಶಿವಶಂಕರ್, ಕನಪುರ ತಾಲೂಕಿನ ಹೂಕುಂದಾ ನಿವಾಸಿ ಅಮೀರ್ ಅಹ್ಮದ್, ಆಂಧ್ರ ಪ್ರದೇಶದ ಗುಂಟೂರು ತಾಲೂಕಿನ ನಲ್ಲಚೆರವು ನಿವಾಸಿ ಶಿವಯ್ಯ ಹಾಗೂ ನಂದ್ಯಾಲ ಮಂಡಲ್ ತಾಲೂಕಿನ ಶ್ರೀನಿವಾಸ ನಗರ ನಿವಾಸಿ ಬಾಲಮಂದಿಲೇಟಿ ಬಂಧಿತ ಆರೋಪಿಗಳು.
ಬಂಧಿತರಿಂದ 105,66,36,000 ರೂ. ವೌಲ್ಯದ ಒಟ್ಟು 98 ‘ಲಿರಾ’ ಕರೆನ್ಸಿ, ಒಂಬತ್ತು ಮೊಬೈಲ್ ಫೋನ್ಗಳು, ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ಸಂಜಯ ನಗರ ಪೊಲೀಸರುವ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಸಂಜಯ ನಗರ ಠಾಣಾ ವ್ಯಾಪ್ತಿಯ ಜಲದರ್ಶಿನಿ ಲೇಔಟ್ ಪಾರ್ಕ್ ಬದಿಯ ರಸ್ತೆಯಲ್ಲಿ ಟರ್ಕಿ ದೇಶದ ನಿಷೇಧಿತ ಕರೆನ್ಸಿ ‘ಲಿರಾ’ವನ್ನು ಭಾರತೀಯ ಹಣಕ್ಕೆ ವಿನಿಮಯ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯಾಧಾರದಲ್ಲಿ ಸಂಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್.ಚಂದ್ರಶೇಖರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಿರಾ ಕರೆನ್ಸಿಯ 5,00,00 ಅಲ್ಲಿನ ವೌಲ್ಯದ ಒಂದು ನೋಟಿನ ವೌಲ್ಯವು ಭಾರತದಲ್ಲಿ 1,07,82,000 ಆಗಿದೆ. ಇಂತಹ 98 ನೋಟುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.