ಬಾಕ್ಸ್ ಆಫೀಸ್ನಲ್ಲಿ “ಗೋಲ್ಮಾಲ್ ಎಗೇನ್” ಕಮಾಲ್
ರೋಹಿತ್ ಶೆಟ್ಟಿ ನಿರ್ದೇಶದ ‘ಗೋಲ್ಮಾಲ್ ಎಗೇನ್’ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಕಾಮಿಡಿ-ಹಾರರ್ಗಳ ಹದವಾದ ಸಮ್ಮಿಶ್ರಣದ ಈ ಚಿತ್ರವು ತೆರೆಕಂಡಲ್ಲೆಲ್ಲಾ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ಆಫೀಸನ್ನು ಚಿಂದಿ ಉಡಾಯಿಸಿದೆ. ಅಕ್ಟೋಬರ್ 20ರಂದು ಜಗತ್ತಿನಾದ್ಯಂತ ಬಿಡುಗಡೆಗೊಂಡಿರುವ ಗೋಲ್ಮಾಲ್ ಎಗೇನ್ ಎರಡೇ ವಾರಗಳಲ್ಲಿ 250 ಕೋಟಿ ರೂ. ಬಾಚಿಕೊಂಡಿದೆ.
ಅಷ್ಟೇ ಅಲ್ಲ, ಬಾಹುಬಲಿ 2 ಬಳಿಕ ಗರಿಷ್ಠ ಹಣ ಸಂಪಾದಿಸಿದ ಎರಡನೆ ಚಿತ್ರವೆಂಬ ದಾಖಲೆಯನ್ನು ಕೂಡಾ ಗೋಲ್ಮಾಲ್ ಎಗೇನ್ ನಿರ್ಮಿಸಿದೆ. 137 ಕೋಟಿ ರೂ.ಸಂಪಾದಿಸಿದ ಜುಡ್ವಾ2, ಈ ವರ್ಷದ ಎರಡನೆ ಗರಿಷ್ಠ ದಾಖಲೆಯ ಚಿತ್ರವೆನಿಸಿತ್ತು. ಇದೀಗ ಗೋಲ್ಮಾಲ್ ಎಗೇನ್ ಆ ದಾಖಲೆಯನ್ನು ನಿರಾಯಾಸವಾಗಿ ಮುರಿದಿದೆ.
ಅಜಯ್ದೇವಗನ್, ಪರಿಣಿತಿ ಚೋಪ್ರಾ, ಟಬು, ಅರ್ಶದ್ ವಾರ್ಸಿ, ಕುನಾಲ್ ಖೇಮು, ತುಷಾರ್ ಕಪೂರ್, ಶ್ರೇಯಸ್ ತಲ್ಪಡೆ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಗೋಲ್ಮಾಲ್ ಎಗೇನ್, ಆಮಿರ್ ಖಾನ್ರ ಸೀಕ್ರೆಟ್ ಸೂಪರ್ ಸ್ಟಾರ್ನ ಪ್ರಬಲ ಸ್ಪರ್ಧೆಯ ನಡುವೆಯೂ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ. ಗೋಲ್ಮಾಲ್ನ ಭರ್ಜರಿ ಗೆಲುವು, ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಮಂಕಾಗಿದ್ದ ಬಾಲಿವುಡ್ಗೆ ಆಕ್ಸಿಜನ್ ನೀಡಿದೆಯೆಂದು ಚಿತ್ರಪಂಡಿತರ ಲೆಕ್ಕಾಚಾರವಾಗಿದೆ.