ಮಮ್ಮುಟ್ಟಿಯ ದಿ ಗ್ರೇಟ್ ಫಾದರ್ ಟಾಲಿವುಡ್ ಗೆ
ಮೋಹನ್ಲಾಲ್ ಅಭಿನಯದ ಸೂಪರ್ಹಿಟ್ ಚಿತ್ರ ‘ದೃಶ್ಯಂ’ನ ಬಳಿಕ ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಸಿನೆಮಾ ಕೂಡಾ ತೆಲುಗಿಗೆ ರಿಮೇಕ್ ಆಗುತ್ತಿದೆ. ಹೌದು. ಈ ವರ್ಷ ತೆರೆಕಂಡ ‘ದಿ ಗ್ರೇಟ್ ಫಾದರ್’ ಚಿತ್ರ ತೆಲುಗಿಗೆ ರಿಮೇಕ್ ಆಗಲಿರುವುದು ಈಗ ಕನ್ಫರ್ಮ್ ಆಗಿದೆ. ವೆಂಕಟೇಶ್ ನಾಯಕನಟನಾಗಿ ಅಭಿನಯಿಸಲಿರುವ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ.
‘ದಿ ಗ್ರೇಟ್ ಫಾದರ್’ ಚಿತ್ರವು 50 ಕೋಟಿ ರೂ. ಗಳಿಸಿದ ಮಮ್ಮುಟ್ಟಿಯ ಪ್ರಪ್ರಥಮ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊಸಬರಾದ ಹನೀಫ್ ಅದೇನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.
‘ದಿ ಗ್ರೇಟ್ ಫಾದರ್’ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲು ಹೊರಟಿರುವ ವೆಂಕಟೇಶ್ ತನ್ನದೇ ಬ್ಯಾನರ್ನಲ್ಲಿ ನಿರ್ಮಿಸಲಿದ್ದಾರೆ. ಚಿತ್ರದ ನಿರ್ದೇಶಕ ಯಾರು ಎಂದು ಬಹಿರಂಗಗೊಂಡಿಲ್ಲ ವಾದರೂ, ವೆಂಕಟೇಶ್ ಈಗಾಗಲೇ ಇಬ್ಬರು ಪ್ರಸಿದ್ಧ ನಿರ್ದೇಶಕರ ಜೊತೆ ಮಾತುಕತೆ ನಡೆಸುತ್ತಿದ್ದಾರಂತೆ.
ತನ್ನ ಮಗಳಿಗಾದ ಅನ್ಯಾಯದ ವಿರುದ್ಧ ಸೇಡು ತೀರಿಸುವ ತಂದೆಯ ಕಥೆಯನ್ನು ಒಳಗೊಂಡ ‘ದಿ ಗ್ರೇಟ್ ಫಾದರ್’ನಲ್ಲಿ ಮಮ್ಮುಟ್ಟಿ ಜೊತೆ ಸ್ನೇಹಾ, ಆರ್ಯ, ಬೇಬಿ ಅನಘಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು.