ಸಾಮಾಜಿಕ ಜಾಲತಾಣದಲ್ಲಿ ವಧು ಅರಸಿ ಹೊರಟಿದ್ದಾರೆ ಈ ಪ್ರಸಿದ್ಧ ನಟ!
ಮದುವೆಯಾಗಲು ಬಯಸಿದ್ದರೆ ಈ ನಂಬರ್ ಗೆ ಕಾಲ್ ಮಾಡಿ
ಚೆನ್ನೈ, ನ.21: ಇಂದಿನ ದಿನಗಳಲ್ಲಿ ವಧು-ವರರನ್ನು ಹುಡುಕುವುದು ಅಷ್ಟು ಕಷ್ಟವೇನಲ್ಲ. ಮ್ಯಾಟ್ರಿಮೋನಿಯಂತಹ ಹಲವು ವೆಬ್ ಸೈಟ್ ಗಳು ಮದುವೆ ಸಂಬಂಧಕ್ಕಾಗಿಯೇ ಇದೆ. ಆದರೆ ತಮಿಳಿನ ಪ್ರಸಿದ್ಧ ನಟರೊಬ್ಬರು ಇವೆಲ್ಲಕ್ಕಿಂತ ಭಿನ್ನವಾಗಿ ಸಾಮಾಜಿಕ ಜಾಲತಾಣದ ಮೂಲಕ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡುವ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ.
'ಮದ್ರಾಸ್ ಪಟ್ಟಣಂ', 'ರಾಜರಾಣಿ', 'ಆರಂಭಂ', 'ಬಾಸ್ ಎಂಗಿರ ಭಾಸ್ಕರನ್'ನಂತಹ ಸೂಪರ್ ಹಿಟ್ ಸಿನೆಮಾಗಳ ನಾಯಕ ಆರ್ಯ ಈ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದವರು. ಈ ಬಗ್ಗೆ ಟ್ವಿಟರ್ ನಲ್ಲಿ ಅವರೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
“ಕಳೆದ ವಾರ ನನ್ನ ವಿಡಿಯೋವೊಂದು ವೈರಲ್ ಆಗಿತ್ತು, ಮದುವೆಯ ಬಗ್ಗೆ ನಾನು ಮಾತನಾಡುತ್ತಿದ್ದ ಆ ವಿಡಿಯೋ ಸ್ನೇಹಿತರು ಮಾಡಿದ ಪ್ರ್ಯಾಂಕ್ ಆಗಿತ್ತು. ಆದರೆ ನಿಜವಾಗಿಯೂ ನಾನು ಬಾಳಸಂಗಾತಿಯನ್ನು ಹುಡುಕುತ್ತಿದ್ದೇನೆ. ಸಾಮಾನ್ಯವಾಗಿ ಸ್ನೇಹಿತರು. ಕುಟುಂಬಸ್ಥರು ಅಥವಾ ಮ್ಯಾಟ್ರಿಮೋನಿಯ ಮೂಲಕ ಬಾಳ ಸಂಗಾತಿಯನ್ನು ಹುಡುಕಲಾಗುತ್ತದೆ. ಆದರೆ ನಾನು ಹಾಗಲ್ಲ. ನನಗೆ ಯಾವುದೇ ಬೇಡಿಕೆಯಾಗಲಿ, ಕಂಡಿಷನ್ ಗಳಾಗಲೀ ಇಲ್ಲ. ನೀವು ನನ್ನನ್ನು ಇಷ್ಟಪಟ್ಟರೆ, ನಾನು ನಿಮಗೆ ಒಳ್ಳೆಯ ಲೈಫ್ ಪಾರ್ಟ್ ನರ್ ಎಂದು ನೀವು ಭಾವಿಸಿದರೆ ಮೊಬೈಲ್ ಸಂಖ್ಯೆ-7330173301ಗೆ ಕರೆ ಮಾಡಬಹುದು. ಇದು ತಮಾಷೆ ಅಥವಾ ಪ್ರ್ಯಾಂಕ್ ಅಲ್ಲ. ನಿಮ್ಮ ಕರೆಯ ನಿರೀಕ್ಷೆಯಲ್ಲಿದ್ದೇನೆ” ಎಂದು ಆರ್ಯ ವಿಡಿಯೋದಲ್ಲಿ ಹೇಳಿದ್ದಾರೆ.