26 ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಯಲ್ಲಿ ಜೊತೆಯಾಗಲಿರುವ ಅನಿಲ್- ಮಾಧುರಿ
ಬಾಲಿವುಡ್ ಚಿತ್ರರಂಗದ ಪರದೆಯ ಮೇಲಿನ ಜನಪ್ರಿಯ ತಾರಾ ಜೋಡಿ ಅನಿಲ್ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ಬರೋಬ್ಬರಿ 26 ವರ್ಷಗಳ ಬಳಿಕ ಮತ್ತೊಮ್ಮೆ ಒಂದೇ ಚಿತ್ರಕ್ಕಾಗಿ ಬಣ್ಣ ಹಚ್ಚಲು ರೆಡಿಯಾಗುತ್ತಿದ್ದಾರೆ. ಅಪ್ಪಟ ಕಾಮಿಡಿ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಟೋಟಲ್ ಧಮಾಲ್ ಎಂದು ಹೆಸರಿಡಲಾಗಿದೆ. ಈ ಚಿತ್ರ ಯಾವಾಗ ಸೆಟ್ಟೇರಲಿದೆಯೆಂಬುದನ್ನು ಅನಿಲ್ ಮತ್ತು ಮಾಧುರಿ ದೀಕ್ಷಿತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಅಂತಹ ದಿನ ಕೂಡಿಬಂದಿದೆ. ಇಂದ್ರಕುಮಾರ್ ನಿರ್ದೇಶನದ ‘ಟೋಟಲ್ ಧಮಾಲ್’ ಚಿತ್ರ ಈ ವಾರ ಸೆಟ್ಟೇರಿದ್ದು, ಭರದಿಂದ ಚಿತ್ರೀಕರಣ ನಡೆಯುತ್ತಿದೆ.
ಸುಮಾರು ಎರಡೂವರೆ ದಶಕಗಳ ದೀರ್ಘ ಅಂತರದ ಬಳಿಕ ಮಾಧುರಿ ಹಾಗೂ ಅನಿಲ್ ಜೊತೆಯಾಗಿ ಒಂದೇ ಬೆಳ್ಳಿಪರದೆಯನ್ನು ಹಂಚಿಕೊಂಡಿರುವ ಬಗ್ಗೆ ನಿರ್ದೇಶಕ ಇಂದ್ರಕುಮಾರ್ ಹರ್ಷ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
ಅನಿಲ್ ಹಾಗೂ ಮಾಧುರಿ ಜೊತೆಯಾಗಿ ನಟಿಸಿದ ಮೊದಲ ಚಿತ್ರ ತೇಜಾಬ್ ಭರ್ಜರಿ ಯಶಸ್ಸು ಕಾಣುವುದರೊಂದಿಗೆ, ಅವರಿಬ್ಬರೂ ಬಾಲಿವುಡ್ನ ಹಿಟ್ ತಾರಾಜೋಡಿಯೆನಿಸಿಕೊಂಡಿದರು. ಆನಂತರ ಇವರಿಬ್ಬರೂ ಜೊತೆಯಾಗಿ ನಟಿಸಿದ ಪರಿಂದಾ, ಬೇಟಾ, ಕಿಶನ್ ಕನ್ಹಯ್ಯ ಮತ್ತಿತರ ಚಿತ್ರಗಳು ಕೂಡಾ ಅದ್ಭುತ ಯಶಸ್ಸು ಗಳಿಸಿದ್ದವು. ಇದೀಗ ಬಾಲಿವುಡ್ನ ಈ ಜನಪ್ರಿಯ ತಾರಾಜೋಡಿ, ಪಕ್ಕಾ ಕಾಮಿಡಿ ಚಿತ್ರ ಟೋಟಲ್ ಧಮಾಲ್ನಲ್ಲಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಲು ಸಿದ್ಧರಾಗುತ್ತಿದ್ದಾರೆ.