ಕಳಂಕ್ನಲ್ಲಿ ಮಾಧುರಿ-ಆಲಿಯಾ ಡಾನ್ಸ್ ಜುಗಲ್ಬಂದಿ
ಕರಣ್ ಜೋಹರ್ ಅವರ ಬಹುನಿರೀಕ್ಷಿತ ಪ್ರಾಜೆಕ್ಟ್, ‘ಕಳಂಕ್’ ಕೊನೆಗೂ ಸೆಟ್ಟೇರಲು ಸಜ್ಜಾಗುತ್ತಿದೆ. ಸೂಪರ್ಹಿಟ್ ಚಿತ್ರ ‘2ಸ್ಟೇಟ್ಸ್’ನ ನಿರ್ದೇಶಕ ಅಭಿಷೇಕ್ ವರ್ಮಾ ಆ್ಯಕ್ಷನ್ ಕಟ್ ಹೇಳಲಿರುವ ಕಳಂಕ್ 1940ರ ಸ್ವಾತಂತ್ರಪೂರ್ವ ಭಾರತದ ಹಿನ್ನೆಲೆಯಲ್ಲಿ ನಡೆಯುವ ರೋಚಕ ಕಥಾನಕವೊಂದನ್ನು ಒಳಗೊಂಡಿದೆ. ಇದೊಂದು ಅದ್ದೂರಿಯ ಮಲ್ಟಿಸ್ಟಾರ್ ಚಿತ್ರವೂ ಹೌದು. ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆಲಿಯಾ ಭಟ್, ವರುಣ್ ಧವನ್, ಆದಿತ್ಯ ಕಪೂರ್ ಹಾಗೂ ಸಂಜಯ್ದತ್ತ್ ಮತ್ತಿತರರ ಜನಪ್ರಿಯ ತಾರಾಬಳಗವೇ ಇಲ್ಲಿದೆ. ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದ್ದು, ವರುಣ್ ಧವನ್ ಹಾಗೂ ಕೀರಾ ಅಡ್ವಾಣಿ ಅವರ ಇಂಟ್ರಡಕ್ಷನ್ ಸಾಂಗ್ನ ಚಿತ್ರೀಕರಣ ಕೂಡಾ ಪೂರ್ಣಗೊಂಡಿದೆ.
ಮಾಧುರಿ ದೀಕ್ಷಿತ್ ಹಾಗೂ ಆಲಿಯಾಭಟ್ ಜೊತೆಯಾಗಿ ಹಾಡೊಂದರಲ್ಲಿ ಡಾನ್ಸ್ ಮಾಡಲಿದ್ದಾರೆ. ಇದುವೇ ಈ ಚಿತ್ರದ ಪ್ರಮುಖ ಹೈಲೈಟ್ ಆಗಲಿದೆ. ಮಾಧುರಿ ಹಾಗೂ ಆಲಿಯಾಭಟ್ ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಒಂದೇ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳಲಿರುವುದು ಕಳಂಕ್ ಕುರಿತಾದ ಕುತೂಹಲವನ್ನು ಇಮ್ಮಡಿಗೊಳಿಸಲಿದೆ. ಬೇರೆ ಬೇರೆ ತಲೆಮಾರಿನ ಇಬ್ಬರು ಪ್ರತಿಭಾವಂತ ನಟಿಯರು ಸಂಗಮಿಸಿರುವ ಈ ಚಿತ್ರ ತೆರೆಗೆ ಬರಲು ಮುಂದಿನ ವರ್ಷದವರೆಗೆ ಕಾಯಲೇಬೇಕು.