ಬಾಲಿವುಡ್ಗೆ ಪ್ರೇಮಂ
‘ಪ್ರೇಮಂ’ ಮಲಯಾಳಂ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲನ್ನು ನೆಟ್ಟ ಚಿತ್ರ. ನಿವಿನ್ಪೌಲಿ, ಸಾಯಿಪಲ್ಲವಿ ಅಭಿನಯದ ಪ್ರೇಮಂ, ಬಾಕ್ಸ್ ಆಫೀಸ್ನಲ್ಲಿ ಜಯಭೇರಿ ಬಾರಿಸಿದ್ದಲ್ಲದೆ, ತೆಲುಗಿಗೂ ರಿಮೇಕ್ ಗೊಂಡಿತ್ತು. ಹೆಸರೇ ಹೇಳುವಂತೆ ಅಪ್ಪಟ ರೋಮ್ಯಾಂಟಿಕ್ ಕಥಾವಸ್ತುವುಳ್ಳ ಈ ಚಿತ್ರ ಈಗ ಬಾಲಿವುಡ್ ನಿರ್ಮಾಪಕರ ಗಮನವನ್ನೂ ಸೆಳೆದಿದೆ.
ಹೌದು. ಪ್ರೇಮಂ ಬಾಲಿವುಡ್ಗೆ ರಿಮೇಕ್ ಆಗಲಿದೆ. ಯುವ ನಿರ್ದೇಶಕ ಅಭಿಷೇಕ್ ಕಪೂರ್ ನಿರ್ದೇಶಿಸಲಿರುವ ಈ ಚಿತ್ರದ ನಾಯಕನಾಗಿ ಅರ್ಜುನ್ ಕಪೂರ್ ನಟಿಸುವುದು ಖಚಿತವಾಗಿದೆ. ಮೂಲ ಚಿತ್ರದಂತೆ, ಈ ಚಿತ್ರಕ್ಕೆ ಮೂವರು ನಾಯಕಿಯರಿದ್ದು, ಅವರಿಗಾಗಿ ತಲಾಶ್ ನಡೆಯುತ್ತಿದೆ. ಪ್ರೇಮಂನಲ್ಲಿ ತನ್ನ ಹೃದಯಸ್ಪರ್ಶಿ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ಸಾಯಿಪಲ್ಲವಿ, ಬಾಲಿವುಡ್ ರಿಮೇಕ್ನಲ್ಲಿ ನಟಿಸುವ ಸಾಧ್ಯತೆಗಳಿವೆಯೆಂಬ ವದಂತಿಗಳೂ ತೇಲಿಬರುತ್ತಿವೆ.
ಆದಾಗ್ಯೂ, ಅರ್ಜುನ್ ಕಪೂರ್ ಇತ್ತೀಚಿನ ದಿನಗಳಲ್ಲಿ ತುಂಬಾ ಬ್ಯುಸಿಯಾಗಿ ಬಿಟ್ಟಿದ್ದಾರೆ. ಅಶುತೋಷ್ ಗೋವಾರಿಕರ್ ಅವರ ಪಾಣಿಪತ್ ಚಿತ್ರಕ್ಕೆ ಕಾಲ್ಶೀಟ್ ನೀಡಿರುವ ಈ ಯುವನಟ, ಸದ್ಯಕ್ಕೆ ಸಂದೀಪ್ ಔರ್ ಪಿಂಕಿ ಫರಾರ್ ಮತ್ತು ನಮಸ್ತೆ ಇಂಗ್ಲೆಂಡ್ ಚಿತ್ರದ ಶೂಟಿಂಗ್ನಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರಗಳ ಕೆಲಸ ಪೂರ್ಣಗೊಂಡ ಬಳಿಕವಷ್ಟೇ ಅರ್ಜುನ್, ಪ್ರೇಮಂ ರಿಮೇಕ್ಗೆ ಬಣ್ಣಹಚ್ಚಲಿದ್ದಾರಂತೆ.