ರಾ.ವನ್ ಸಿನೆಮಾದ 2ನೇ ಭಾಗ ಮಾಡಲೂಬಹುದು
ಅನುಭವ್ ಸಿನ್ಹಾ
ಬಾಲಿವುಡ್ ಕಿಂಗ್ ಶಾರುಕ್ ಖಾನ್ರ ಸೂಪರ್ಹೀರೊ ಸಿನೆಮಾ ರಾ.ವನ್ ಹೇಳುವಷ್ಟು ಯಶಸ್ಸು ಗಳಿಸಲಿಲ್ಲ. ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿಗೂ ಮಿಕ್ಕ ವ್ಯವಹಾರ ಮಾಡಿದರೂ ರಾ.ವನ್ ಪ್ರೇಕ್ಷಕರ ಜೊತೆಗೆ ಚಿತ್ರತಂಡಕ್ಕೂ ನಿರಾಸೆಯನ್ನುಂಟು ಮಾಡಿತ್ತು. ಆದರೆ ಚಿತ್ರದ ನಿರ್ದೇಶಕ ಅನುಭವ್ ಸಿನ್ಹಾ, ರಾ.ವನ್ ಸೀಕ್ವಲ್ ನಿರ್ಮಿಸುವ ಬಗ್ಗೆ ಆಶಾವಾದ ಹೊಂದಿದ್ದಾರೆ. ಶಾರೂಖ್ ಮತ್ತು ನಾನು ಸಿಕ್ಕಾಗಲೆಲ್ಲಾ ರಾ.ವನ್ ಬಗ್ಗೆ ಮಾತನಾಡುತ್ತೇವೆ. ಈ ಚಿತ್ರದ ಎರಡನೇ ಭಾಗವನ್ನು ನಿರ್ಮಿಸಬೇಕೆಂದು ಶಾರುಕ್ಗೂ ಮನಸ್ಸಿದೆ. ಆದರೆ ಯಾವುದೇ ಒಂದು ಖಚಿತ ನಿರ್ಧಾರಕ್ಕೆ ಬಂದಿಲ್ಲ. ನನಗೂ ಈ ಸಿನೆಮಾದ ಸೀಕ್ವಲ್ ನಿರ್ದೇಶಿಸಬೇಕೆಂಬ ಹಂಬಲವಿದೆ. ಆದರೆ ಅದಕ್ಕೆ ಸರಿಯಾದ ಕತೆ ಸಿಗುತ್ತಿಲ್ಲ ಎಂದು ಸಿನ್ಹಾ ತಿಳಿಸಿದ್ದಾರೆ. ರಾ.ವನ್ 2 ತಯಾರಿಸಲು ಅದಕ್ಕೆ ತಕ್ಕುದಾದ ಕತೆಯಿರಬೇಕು ಎಂಬುದು ಸಿನ್ಹಾ ಅಭಿಪ್ರಾಯ. ನಾನು ಹಲವು ಕತೆಗಳನ್ನು ಯೋಚಿಸಿದೆ. ಆದರೆ ಯಾವುದೂ ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಿಲ್ಲ. ಬಹುಶಃ ಒಂದು ದಿನ ವಿಮಾನದಲ್ಲಿ ಸುದೀರ್ಘ ಪ್ರಯಾಣ ಮಾಡಿದ ಸಂದರ್ಭದಲ್ಲಿ ತಲೆಯಲ್ಲಿ ಒಂದು ಉತ್ತಮ ಕತೆ ಮೂಡಲೂಬಹುದು ಎಂದು ಸಿನ್ಹಾ ಹೇಳುತ್ತಾರೆ. ರಾ.ವನ್ ಸಿನೆಮಾದಲ್ಲಿ ಶಾರುಕ್ ಖಾನ್, ಜಿ.ವನ್ ಪಾತ್ರ ನಿರ್ವಹಿಸಿದ್ದರೆ ಅರ್ಜುನ್ ರಾಂಪಾಲ್ ರಾ.ವನ್ ಆಗಿ ನಟಿಸಿದ್ದರು. 2011ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಕರೀನಾ ಕಪೂರ್ ಕೂಡಾ ಅಭಿನಯಿಸಿದ್ದರು. ಸದ್ಯ ಅನುಭವ್ ಸಿನ್ಹಾ ತಮ್ಮ ಮುಲ್ಕ್ ಸಿನೆಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮುಸ್ಲಿಂ ಕುಟುಂಬವೊಂದು ತನ್ನ ಕಳೆದು ಹೋದ ಗೌರವವನ್ನು ಮರಳಿ ಗಳಿಸಲು ಹೋರಾಡುವ ಕತೆಯನ್ನು ಈ ಸಿನೆಮಾ ಹೊಂದಿದೆ. ರಿಶಿ ಕಪೂರ್, ತಾಪ್ಸಿ ಪನ್ನು, ನೀನಾ ಗುಪ್ತಾ, ರಜತ್ ಕಪೂರ್, ಮನೋಜ್ ಪಹ್ವಾ, ಕುಮುದ್ ಮಿಶ್ರಾ ಮತ್ತು ಆಶುತೋಷ್ ರಾಣಾರಂಥ ಅನುಭವಿ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.