ಧೂಮ್ 4ನಲ್ಲಿ ಶಾರುಕ್ ಧಮಾಕ
ಬಾಲಿವುಡ್ನಲ್ಲಿ ಈಗ ಸಿಕ್ವೇಲ್ ಚಿತ್ರಗಳ ಯುಗ. ದಬಾಂಗ್ ಹಾಗೂ ಡಾನ್ ಚಿತ್ರಗಳ, ಮುಂದುವರಿದ ಭಾಗಗಳು ಬರಲಿವೆಯೆಂಬ ಸುದ್ದಿಯ ಬೆನ್ನಲ್ಲೇ, ಧೂಮ್ 4 ಚಿತ್ರದ ಶೂಟಿಂಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಭಾರೀ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಧೂಮ್ 4ನಲ್ಲಿ, ಬಾಲಿವುಡ್ ಬಾದ್ಶಾಹ ಶಾರುಕ್ ಖಾನ್ ನಟಿಸುವುದು ಈಗ ಕನ್ಫರ್ಮ್ ಆಗಿದೆ.
ಧೂಮ್ ಚಿತ್ರದ ಮೊದಲ ಮೂರು ಸಿಕ್ವೇಲ್ಗಳಲ್ಲಿ ಕ್ರಮವಾಗಿ ಜಾನ್ ಅಬ್ರಹಾಂ, ಹೃತಿಕ್ ರೋಶನ್ ಆಮಿರ್ಖಾನ್, ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ನಟಿಸಿದ್ದರು. ಧೂಮ್ 4ನಲ್ಲಿ ಅಂತಹದೇ ಪಾತ್ರವನ್ನು ಶಾರುಕ್ ಇಲ್ಲವೇ ಸಲ್ಮಾನ್ ನಿರ್ವಹಿ ಸಲಿದ್ದಾರೆಂಬ ವದಂತಿಗಳು ಬಹಳ ದಿನಗಳಿಂದಲೂ ಬಾಲಿವುಡ್ನಲ್ಲಿ ಕೇಳಿಬರುತ್ತಿದ್ದವು. ಆದರೆ ಸಲ್ಮಾನ್, ಧೂಮ್4 ನಲ್ಲಿ ನಟಿಸುತ್ತಿಲ್ಲವೆಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆಎಳೆದಿದ್ದರು. ಇದೀಗ ಕೊನೆಗೂ ಆ ಪಾತ್ರ ಶಾರುಕ್ ಪಾಲಾಗಿದೆ.ಧೂಮ್4ನ ಕಥೆ ಕೇಳಿದ ಬಳಿಕ, ಶಾರುಕ್ ನಟಿಸಲು ಗ್ರೀನ್ಸಿಗ್ನಲ್ ನೀಡಿದ್ದಾರೆಂಬ ಮಾತುಗಳ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ. ಆದಾಗ್ಯೂ ನಿರ್ಮಾಣ ಸಂಸ್ಥೆ ಯಶ್ರಾಜ್ ಪ್ರೊಡಕ್ಷನ್ಸ್ ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಾಗಿದೆ. ಆದಾಗ್ಯೂ ಧೂಮ್ ಸರಣಿಯ ಹಿಂದಿನ ಎಲ್ಲಾ ಚಿತ್ರಗಳಲ್ಲಿ ಅಭಿಷೇಕ್ ಬಚ್ಚನ್ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿಯ ಪಾತ್ರವನ್ನು ಧೂಮ್ 4ರಲ್ಲಿ ರಣವೀರ್ ಸಿಂಗ್ ನಿರ್ವಹಿಸಲಿದ್ದಾರೆ. ಎಂದಿನಂತೆ ಉದಯ್ ಚೋಪ್ರಾ ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ.
ಆದರೆ ನಾಯಕಿ ಯಾರೆಂಬ ಪ್ರಶ್ನೆ ಮಾತ್ರ ಇನ್ನೂ ಕೂಡಾ ಸಸ್ಪೆನ್ಸ್ ಆಗಿಯೇ ಉಳಿದುಬಿಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಈ ವರ್ಷ ಅಂತ್ಯದ ವೇಳೆಗೆ ಧೂಮ್ 4 ಶೂಟಿಂಗ್ಗೆ ರೆಡಿಯಾಗಲಿದೆ.