ಕೆಜಿಎಫ್ ಐದು ಭಾಷೆಗಳಲ್ಲಿ ನವೆಂಬರ್ನಲ್ಲಿ ಬಿಡುಗಡೆ?
ಯಶ್ ನಾಯಕನಾಗಿ ನಟಿಸಿರುವ ಕೆಜಿಎಫ್ ಬಿಡುಗಡೆಯನ್ನು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಕೆಜಿಎಫ್ನ ಟ್ರಯಲರ್ ಹಾಗೂ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಲು ಚಿತ್ರತಂಡ ಎಲ್ಲ ಸಿದ್ಧತೆ ನಡೆಸುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಹೋಮೆಬ್ಲ್ ಫಿಲ್ಮ್ಸ್ ಸಂಸ್ಥೆ ಅಡಿ ನಿರ್ಮಾಣವಾದ ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾಗಲಿದೆ.
ಕನ್ನಡದ ಸಿನೆಮಾ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾ ಗುತ್ತಿರುವುದು ಇದೇ ಮೊದಲು. ಸೆನ್ಸಾರ್ ಮಂಡಳಿಯಲ್ಲಿ ಪ್ರದರ್ಶಿಸಲು ಸಿನೆಮಾ ಸಿದ್ಧವಾಗಿದೆ. ಪ್ರದರ್ಶನದ ನಂತರ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಲಿದೆ. ಸಿನೆಮಾ ನವೆಂಬರ್ 16ರಂದು ಬಿಡುಗಡೆ ಯಾಗುತ್ತಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಡುತ್ತಿದೆ. ಪ್ರಸ್ತುತ ನವೆಂಬರ್ನಲ್ಲಿ ಎರಡು ದಿನಾಂಕಗಳ ಬಗ್ಗೆ ಪ್ರೊಡಕ್ಷನ್ ಹೌಸ್ ಚಿಂತನೆ ನಡೆಸುತ್ತಿದೆ. ತಮಿಳು, ತೆಲುಗು ವಿತರಕರೊಂದಿಗೆ ಸಮಾಲೋಚಿಸಿದ ಬಳಿಕ ಅಂತಿಮವಾಗಿ ದಿನಾಂಕ ಘೋಷಿಸ ಲಾಗುವುದು ಎಂದು ಪ್ರೊಡಕ್ಷನ್ ಹೌಸ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಕೆಜಿಎಫ್ 80 ದಶಕದ ಕಥೆಯನ್ನು ವಸ್ತುವಾಗಿ ಉಳ್ಳ ಚಿತ್ರ. ಚಿತ್ರದಲ್ಲಿ ಯಶ್ ರಾಕಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಡೆಲ್ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ತಮನ್ನಾ ಭಾಟಿಯಾ ಹಾಡೊಂದರಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಭುವನ್ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್ ಕಲೆ, ಹಾಗೂ ರವಿ ಬಸ್ರೂರು ಅವರ ಸಂಗೀತ ಚಿತ್ರಕ್ಕಿದೆ. ಈ ವರ್ಷ ನಿರ್ಮಾಣವಾದ ಅತಿ ದೊಡ್ಡ ಬಜೆಟ್ನ ಚಿತ್ರ ಇದಾಗಿದೆ.