ನಾನಾ ಪಾಟೇಕರ್, ವಿವೇಕ್ ಅಗ್ನಿಹೋತ್ರಿಯಿಂದ ತನುಶ್ರೀಗೆ ಕಾನೂನು ನೋಟಿಸ್
ಹೊಸದಿಲ್ಲಿ, ಅ.4: ಹಿರಿಯ ನಟ ನಾನಾ ಪಾಟೇಕರ್ ಹಾಗೂ ಚಿತ್ರ ತಯಾರಕ ವಿವೇಕ್ ಅಗ್ನಿಹೋತ್ರಿ ತಮಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆಂದು ನಟಿ ತನುಶ್ರೀ ದತ್ತಾ ಹೇಳಿದ್ದಾರೆ. ನಾನಾ ಪಾಟೇಕರ್ ಅವರು ಹತ್ತು ವರ್ಷಗಳ ಹಿಂದೆ `ಹಾರ್ನ್ ಓಕೆ ಪ್ಲೀಸ್' ಚಿತ್ರದ ಚಿತ್ರೀಕರಣದ ವೇಳೆ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರೆಂದು ತನುಶ್ರೀ ಕೆಲ ದಿನಗಳ ಹಿಂದೆ ಆರೋಪಿಸಿರುವುದು ಭಾರೀ ಸುದ್ದಿಯಾಗಿತ್ತು. ವಿವೇಕ್ ಅಗ್ನಿಹೋತ್ರಿ ಅವರು 2005ರಲ್ಲಿ ತಯಾರಾದ ತಮ್ಮ ಚಿತ್ರ `ಚಾಕೊಲೇಟ್' ಚಿತ್ರೀಕರಣದ ವೇಳೆ ತನಗೆ ಬಟ್ಟೆ ಕಳಚಿ ಕ್ಯಾಮರಾ ಮುಂದೆ ಬರಲು ಹೇಳಿದ್ದರೆಂದು ತನುಶ್ರೀ ಆರೋಪಿಸಿದ್ದರು.
ನಾನಾ ಪಾಟೇಕರ್ ಹಾಗೂ ವಿವೇಕ್ ಅಗ್ನಿಹೋತ್ರಿ ಇಬ್ಬರೂ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು. ತನುಶ್ರೀ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ನಾನಾ ತಾನು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ಈ ಹಿಂದೆಯೇ ಹೇಳಿದ್ದು ಅಂತೆಯೇ ಇಬ್ಬರೂ ಈಗ ತನುಶ್ರೀಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ. ತನುಶ್ರೀ ಸದ್ಯ ಅಮೆರಿಕಾದಲ್ಲಿದ್ದಾರೆ.
ತನುಶ್ರೀ ವಿರುದ್ಧ ಮಾನಹಾನಿ ಆರೋಪ ಹೊರಿಸಲಾಗಿದೆ ಎಂದು ಅಗ್ನಿಹೋತ್ರಿ ಅವರ ವಕೀಲ ನಿಧೀಶ್ ಮೆಹ್ರೋತ್ರ ಹೇಳಿದ್ದಾರೆ. ಆರೋಪಗಳ ಬಗ್ಗೆ ಪರಾಮರ್ಶಿಸದೆ ಮಾಧ್ಯಮಗಳೂ ಸೆನ್ಸೇಶನ್ ಸೃಷ್ಟಿಸುವ ಸಲುವಾಗಿ ಸುದ್ದಿಗಳನ್ನು ಪ್ರಕಟಿಸುತ್ತಿವೆ ಎಂದು ಅವರು ಆಪಾದಿಸಿದ್ದಾರೆ.