ಭಾರತದ ಪ್ರಪ್ರಥಮ ಸ್ಪೇಸ್ ಚಿತ್ರದಲ್ಲಿ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ವಿಲನ್ ಆಗಿ ನಟಿಸಿರುವ 2.0 ಶೀಘ್ರ ದಲ್ಲಿ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ಆ್ಯಮಿ ಜಾಕ್ಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಅಕ್ಷಯ್ ಕುಮಾರ್ ಫಾಕ್ಸ್ ಸ್ಟಾರ್ ಸ್ಟುಡಿಯೋ ಹಾಗೂ ಕೇಪ್ ಆಫ್ ಗುಡ್ ಫಿಲ್ಮ್ಸ್ ಸಹಯೋಗದ ಮೂರು ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲು ಎಲ್ಲ ಸಿದ್ಧತೆ ನಡೆಸುತ್ತಿದ್ದಾರೆ. ಈ ಯೋಜನೆಯ ಮೊದಲ ಚಿತ್ರ ‘ಮಿಷನ್ ಮಂಗಳ್’ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಭಾರತದ ಮೊದಲ ಚಿತ್ರವಾಗಲಿದೆ. ಈ ಚಿತ್ರವನ್ನು ಜಗನ್ ಶಕ್ತಿ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣ ನವೆಂಬರ್ ಮಧ್ಯಭಾಗದಲ್ಲಿ ಆರಂಭವಾಗಲಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಅವರನ್ನು ಪ್ರಶ್ನಿಸಿ ದಾಗ, ‘‘ಫಾಕ್ಸ್ ಸ್ಟುಡಿಯೋ ನನ್ನನ್ನು ಸೃಜನಶೀಲ ಭಾಗೀದಾರ ನನ್ನಾಗಿ ಕಂಡು ಕೊಂಡಿರುವುದು ನನಗೆ ಸಂತಸ ತಂದಿದೆ. ಅರ್ಥಪೂರ್ಣ ಹಾಗೂ ಸಿನಿಮೀಯ ಮನರಂಜನೆ ನೀಡುವ ಉದ್ದೇಶದಿಂದ ಸಹಭಾಗಿತ್ವ ರೂಪಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಸಂಘಟಿತ ಸಾಮರ್ಥ್ಯದಿಂದ ಮನರಂಜನೆ ಹಾಗೂ ಸ್ಫೂರ್ತಿ ನೀಡುವ ಉತ್ತಮ ಚಿತ್ರಗಳನ್ನು ನಿರ್ಮಿಸುವ ನಿರೀಕ್ಷೆ ಹೊಂದಿದ್ದೇನೆ’’ ಎಂದಿದ್ದಾರೆ. ‘‘ಫಾಕ್ಸ್ ಸ್ಟಾರ್ ಸ್ಟುಡಿಯೋ ಹಾಗೂ ಅಕ್ಷಯ್ ಕುಮಾರ್ 2017ರಲ್ಲಿ ಜಾಲಿ ‘ಎಲ್ಎಲ್ಬಿ 2’ ಅಂತಹ ಅತಿ ದೊಡ್ಡ ಹಿಟ್ ಚಿತ್ರ ನೀಡಿದ್ದಾರೆ. ಕೇಪ್ ಆಫ್ ಗುಡ್ ಫಿಲ್ಮ್ಸ್ನೊಂದಿಗಿನ ಮೂರು ಚಿತ್ರಗಳ ಭಾಗೀದಾರಿಕೆಯಲ್ಲಿ ಅಕ್ಷಯ್ ಕುಮಾರ್ ಅವರನ್ನು ನಮ್ಮ್ಂದಿಗೆ ಸೇರಿಸಿಕೊಳ್ಳಲು ಬಹಳ ಸಂತೋಷವಾಗುತ್ತಿದೆ. ಬದಲಾಗುತ್ತಿರುವ ವೀಕ್ಷಕರ ಆಯ್ಕೆ ಹಾಗೂ ಸ್ಕ್ರಿಪ್ಟ್ ಅನ್ನು ಅತ್ಯದ್ಬುತವಾಗಿ ಅರ್ಥ ಮಾಡಿಕೊಳ್ಳುವ ನಟ ಅಕ್ಷಯ್ ಕುಮಾರ್. ರಾಷ್ಟ್ರ ಪ್ರಶಸ್ತಿ ವಿಜೇತ ನಟನೊಂದಿಗೆ ಅಭೂತಪೂರ್ವ ಭಾಗೀದಾರಿಕೆಗೆ ನಾವು ಎದುರು ನೋಡುತ್ತಿದ್ದೇವೆ’’ ಎಂದು ಫಾಕ್ಸ್ ಸ್ಟುಡಿಯೋದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ್ ಸಿಂಗ್ ಹೇಳಿದ್ದಾರೆ.