‘ಮುನ್ನಾಭಾಯ್ ಎಂಬಿಬಿಎಸ್’ ಚಿತ್ರದಲ್ಲಿ ನಟಿಸಿದ್ದ ಈ ನಟ 3 ವರ್ಷಗಳಿಂದ ನಾಪತ್ತೆ!
ಮುಂಬೈ, ಜ.13: ರಾಜ್ ಕುಮಾರ್ ಹಿರಾನಿಯವರ ‘ಮುನ್ನಾಭಾಯ್ ಎಂಬಿಬಿಎಸ್’ ಚಿತ್ರದಲ್ಲಿ ರೋಗಿಯಾಗಿ ನಟನ ನೆನಪಿದೆಯೇ?... ಈತ ಮೂರು ವರ್ಷಗಳಿಂದ ನಾಪತ್ತೆಯಾಗಿದ್ದಾನೆ ಎಂದು ‘ದ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಸ್ಟಾರ್ ವಾರ್ಸ್: ದ ಫೋರ್ಸ್ ಅವೇಕನ್ಸ್ ಚಿತ್ರ ವೀಕ್ಷಿಸಲು ತೆರಳುವುದಾಗಿ 2015ರ ಡಿಸೆಂಬರ್ 31ರಂದು ತನ್ನ ತಾಯಿಗೆ ಹೇಳಿ ಹೋಗಿದ್ದ ವಿಶಾಲ್ ಠಕ್ಕರ್ ಇನ್ನೂ ಪತ್ತೆಯಾಗಿಲ್ಲ. ರಾತ್ರಿ 10.30 ವೇಳೆಗೆ ತಾಯಿಯಿಂದ 500 ರೂಪಾಯಿ ಪಡೆದು ಮುಳುಂದ್ ನಲ್ಲಿರುವ ಮನೆಯಿಂದ ಹೊರಟಿದ್ದ ಅವರು ಆ ಬಳಿಕ ಪತ್ತೆಯಾಗಿಲ್ಲ.
ರಾತ್ರಿ 1 ಗಂಟೆ ಸುಮಾರಿಗೆ ತಂದೆ ಮಹೇಂದ್ರ ಅವರಿಗೆ ಸಂದೇಶ ಕಳುಹಿಸಿ, ಪಾರ್ಟಿಯೊಂದಕ್ಕೆ ಹೋಗಿ ಮರುದಿನ ಬರುವುದಾಗಿ ಹೇಳಿದ್ದ. ಆದರೆ ಮತ್ತೆ ಹಿಂದುರುಗಲೇ ಇಲ್ಲ. ಇದೀಗ ಮೂರು ವರ್ಷ ಕಳೆದಿದ್ದು, ಈ ಪ್ರಕರಣದ ತನಿಖೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ.
ಜನವರಿ 1ರಂದು ಬೆಳಗ್ಗೆ 11:45ರ ವೇಳೆಗೆ ಚೋಡ್ಬಂದರ್ ರಸ್ತೆಯಲ್ಲಿ ಆತನ ಸ್ನೇಹಿತೆ ಆತನನ್ನು ಕೊನೆಯ ಬಾರಿ ನೋಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಶೂಟಿಂಗ್ ಗಾಗಿ ಅಂಧೇರಿಗೆ ಹೋಗಲು ಆಟೊರಿಕ್ಷಾದಲ್ಲಿ ತೆರಳಿದ್ದ ಎಂದು ಆಕೆ ಹೇಳಿದ್ದಳು. ಅದೇ ದಿನ ಮಧ್ಯಾಹ್ನ 12.10ಕ್ಕೆ ಫೇಸ್ಬುಕ್ನಲ್ಲಿ ಹೊಸ ವರ್ಷದ ಶುಭಾಶಯ ತಿಳಿಸಿದ್ದೇ ಈ ನಟನ ಕೊನೆಯ ಪೋಸ್ಟ್.
ಆ ಬಳಿಕ ವಿಶಾಲ್ ಕಣ್ಮರೆಯಾಗಿದ್ದ. ಆತನ ಫೋನ್ ಸ್ವಿಚ್ಆಫ್ ಆಗಿದೆ. ಆ ದಿನದಿಂದ ಬ್ಯಾಂಕ್ ಖಾತೆಯಲ್ಲೂ ಯಾವುದೇ ವಹಿವಾಟು ನಡೆದಿಲ್ಲ.
"ಆರಂಭದಲ್ಲಿ ಆತನ ಗರ್ಲ್ಫ್ರೆಂಡ್ ಮೇಲೆ ಅನುಮಾನ ಇತ್ತು. ಆದರೆ ಆಕೆಯ ಹೇಳಿಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ” ಎಂದು ತನಿಖಾಧಿಕಾರಿಯಾಗಿದ್ದ ಮಹೇಂದ್ರಪುರಿ ಹೇಳುತ್ತಾರೆ. ಇದು ಕೊಲೆಯೇ, ಅಪಹರಣವೇ ಅಥವಾ ಆತನೇ ಓಡಿಹೋಗಿದ್ದಾನೆಯೇ ಎಂಬ ಬಗ್ಗೆ ಪತ್ತೆ ಮಾಡಬೇಕಿದೆ ಎಂದು ಇನ್ಸ್ಪೆಕ್ಟರ್ ಎನ್.ಎ.ಕುಲಕರ್ಣಿ ಹೇಳುತ್ತಾರೆ.