ಮಲಯಾಳಂ ನಟ ವಿನಾಯಕನ್ ವಿರುದ್ಧ ಪ್ರಕರಣ ದಾಖಲು
ತಿರುವನಂತಪುರಂ, ಜೂ.15: ಮಹಿಳಾ ಹೋರಾಟಗಾರ್ತಿಯೊಬ್ಬರನ್ನು ಫೋನ್ ನಲ್ಲಿ ನಿಂದಿಸಿದ ಆರೋಪದ ಮೇಲೆ ಪ್ರಶಸ್ತಿ ವಿಜೇತ ಮಲಯಾಳಂ ನಟ ವಿನಾಯಕನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪಂಬಾಡಿ ಎಂಬಲ್ಲಿನ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. ತಾನು ನಟನನ್ನು ಎಪ್ರಿಲ್ ತಿಂಗಳಲ್ಲಿ ಸಮಾರಂಭವೊಂದಕ್ಕೆ ಆಹ್ವಾನಿಸಿದ ವೇಳೆ ಆತ ಅಶ್ಲೀಲ ಹಾಗೂ ನಿಂದನಾತ್ಮಕ ಪದ ಪ್ರಯೋಗಿಸಿದ್ದಾರೆಂದು ಮಹಿಳೆ ತನ್ನ ದೂರಿನಲ್ಲಿ ಹೇಳಿದ್ದಾರೆ.
ಆಕೆ ಈ ಕುರಿತಂತೆ ಫೇಸ್ ಬುಕ್ ಪೋಸ್ಟ್ ಹಾಕಿದ್ದು, ನಟನ ವಿರುದ್ಧ ಐಪಿಸಿ ಸೆಕ್ಷನ್ 509, 294 ಹಾಗೂ ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 120(ಒ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಮಹಿಳೆ ಕೊಟ್ಟಾಯಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಘಟನೆ ಕಲ್ಪೆಟ್ಟಾದಲ್ಲಿ ನಡೆದಿರುವುದರಿಂದ ಅಲ್ಲಿನ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.
Next Story