'ದಬಾಂಗ್ 3' ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ: ಕನ್ನಡಿಗರಿಗೆ ಸರ್ ಪ್ರೈಸ್ ನೀಡಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ದಬಾಂಗ್ 3 ಚಿತ್ರದ ಮೋಶನ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಸುದೀಪ್, ಸೋನಾಕ್ಷಿ ಸಿನ್ಹಾ ನಟಿಸುತ್ತಿದ್ದು, ಪ್ರಭುದೇವ ನಿರ್ದೇಶಿಸುತ್ತಿದ್ದಾರೆ.
ಚಿತ್ರವು ಡಿಸೆಂಬರ್ 20ರಂದು ತೆರೆಗೆ ಬರಲಿದೆ. ಸಲ್ಮಾನ್ ಖಾನ್ ನಟನೆಯ ದಬಾಂಗ್ ಚಿತ್ರವು ಬಾಲಿವುಡ್ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದು ದಾಖಲೆ ಬರೆದಿತ್ತು. ನಂತರ ಬಿಡುಗಡೆಗೊಂಡ ದಬಾಂಗ್ 2 ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ದಬಾಂಗ್ 3 ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿರುವ ಕಾರಣ ಪಕ್ಕಾ ಮಸಾಲಾ ಎಂಟರ್ ಟೈನರನ್ನು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
ಇಂದು ದಬಾಂಗ್ 3 ಚಿತ್ರದ ಮೋಶನ್ ಪೋಸ್ಟರ್ ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ ಅವತರಣಿಕೆಯಲ್ಲಿ ಸ್ವತಃ ಸಲ್ಮಾನ್ ಖಾನ್ ಧ್ವನಿ ನೀಡಿದ್ದಾರೆ. ಇಷ್ಟೇ ಅಲ್ಲದೆ ಮೋಶನ್ ಪೋಸ್ಟರ್ ನ ಕೊನೆಗೆ ನಿರ್ಮಾಣ, ನಿರ್ಮಾಪಕ, ನಿರ್ದೇಶನ ಸೇರಿ ಇತ್ಯಾದಿ ವಿಷಯಗಳನ್ನು ಕನ್ನಡದಲ್ಲೇ ಬರೆಯಲಾಗಿದೆ. ವಿಶೇಷವೆಂದರೆ ಚಿತ್ರ ಬಿಡುಗಡೆ ದಿನಾಂಕವನ್ನೂ ಕನ್ನಡ ಅಂಕೆಗಳಲ್ಲೇ ಬರೆಯಲಾಗಿದೆ. ಈ ಬಗ್ಗೆ ವಿಡಿಯೋ ವೀಕ್ಷಿಸಿದ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.