ಜಾನ್ ಚಿತ್ರದಲ್ಲಿ ಅರ್ಜುನ್, ಪ್ರೀತ್
ಬಾಲಿವುಡ್ ನಟ ಜಾನ್ ಅಬ್ರಹಾಂ ಅವರ ಚಿತ್ರನಿರ್ಮಾಣ ಸಂಸ್ಥೆ ಜೆಎ ಎಂಟರ್ಟೈನ್ಮೆಂಟ್ ವಿಶಿಷ್ಟ ಕಥಾವಸ್ತುಗಳುಳ್ಳ ಕೆಲವು ಗಮನಾರ್ಹ ಚಿತ್ರಗಳನ್ನು ನೀಡಿದೆ. ಬಾಟ್ಲಾ ಹೌಸ್ ಹಾಗೂ ಸತ್ಯಮೇವ ಜಯತೇ ಚಿತ್ರದ ಬಳಿಕ ಜಾನ್ ಅಬ್ರಹಾಂ ಮತ್ತೊಮ್ಮೆ ಭೂಷಣ್ ಕುಮಾರ್ ಹಾಗೂ ನಿಖಿಲ್ ಆಡ್ವಾಣಿ ಜೊತೆಗೆ ಕೈಜೋಡಿಸಿದ್ದಾರೆ. ಈಗ ಜಾನ್ ಅಬ್ರಹಾಂ ನಿರ್ಮಿಸ ಹೊರಟಿರುವ ಚಿತ್ರವು ಒಂದು ಪಕ್ಕಾ ಲವ್ಸ್ಟೋರಿಯಂತೆ. ಸತ್ಯಮೇವ ಜಯತೇ ಹಾಗೂ ಬಾಟ್ಲಾ ಹೌಸ್ ಚಿತ್ರಗಳಲ್ಲಿ ಜಾನ್ ಅಬ್ರಹಾಂ ನಾಯಕನಾಗಿ ನಟಿಸಿದ್ದರೆ, ಈ ಹೊಸ ಚಿತ್ರದಲ್ಲಿ ಅವರು ಕೇವಲ ನಿರ್ಮಾಪಕರಷ್ಟೇ ಆಗಿದ್ದಾರೆ. ನಾಯಕನಾಗಿ ಅರ್ಜುನ್ ಕಪೂರ್ ನಟಿಸಿದ್ದರೆ, ಟಾಲಿವುಡ್ ಬೆಡಗಿ ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ಮಿಂಚಲಿದ್ದಾರೆ.
ಬಾಟ್ಲಾ ಹೌಸ್ಗೆ ಮುನ್ನ ನಿಖಿಲ್ ಆಡ್ವಾಣಿ ನಿರ್ದೇಶಿಸಿದ್ದ ಚಿತ್ರಗಳಾದ ಡಿಡೇ, ಪಾಟಿಯಾಲ ಹೌಸ್ನಲ್ಲಿ ಸಹನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಕಾಶ್ವಿ ನಾಯರ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕಿಯಾಗಲಿದ್ದಾರೆ.
ಇದೊಂದು ಸರಹದ್ದುಗಳನ್ನು ಮೀರಿದ ರಮ್ಯ ಪ್ರೇಮ ಕಥನವಾಗಿದೆ. ಅನುಜಾ ಚೌಹಾಣ್, ಅಮಿತೋಶ್ ನಾಗ್ಪಾಲ್ ಹಾಗೂ ಕಾಶ್ವಿ ಅತ್ಯಂತ ಹೃದಯಂಗಮವಾದ ಕಥೆಯನ್ನು ಬರೆದಿದ್ದಾರೆ. ಚಿತ್ರವು ಪಂಜಾಬ್ ಹಾಗೂ ಲಾಸ್ ಏಂಜಲೀಸ್ಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣಗೊಳ್ಳಲಿದೆ. ಅರ್ಜುನ್ ಹಾಗೂ ರಾಕುಲ್ ಹಿಂದೆಂದೂ ನಟಿಸಿರದಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಚಿತ್ರದ ಟೈಟಲ್ಗಾಗಿ ಹುಡುಕಾಟ ನಡೆಯುತ್ತಿದೆ.