ಹೃತಿಕ್ ಗೆ ಜಾಗತಿಕ ಟಾಪ್ ತ್ರೀ ಸ್ಥಾನ !
ಜಾನಿ ಡೆಪ್, ಬ್ರಾಡ್ ಪಿಟ್ , ಸಲ್ಮಾನ್ ರನ್ನು ಹಿಂದಿಕ್ಕಿದ
ಮುಂಬೈ, ನ. 25 : ಚಿತ್ರರಂಗದ, ವೈಯಕ್ತಿಕ ಬದುಕಿನ ಏಳುಬೀಳುಗಳು ಏನೇ ಇರಲಿ , ಹೃತಿಕ್ ರೋಷನ್ ಜಗತ್ತಿನ ಅತ್ಯಂತ ಹ್ಯಾಂಡ್ ಸಮ್ , ಆಕರ್ಷಕ ನಟ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಆ ಚಂದದ ಮುಖ, ಆಕರ್ಷಕ ಮೈಕಟ್ಟು ಯಾರಿಗಾದರೂ ಆಕರ್ಷಿಸದೇ ಬಿಡುವುದಿಲ್ಲ. ಈಗ ಈ ಆಕರ್ಷಣೆಗೆ ಜಾಗತಿಕ ಮನ್ನಣೆ ಲಭಿಸಿದೆ.
worldstopmost.com ಬಿಡುಗಡೆ ಮಾಡಿರುವ ಜಾಗತಿಕ ಸಮೀಕ್ಷೆಯಲ್ಲಿ ನಮ್ಮ ಸೂಪರ್ ಸ್ಟಾರ್ ಹೃತಿಕ್ ಜಗತ್ತಿನ ಅತ್ಯಂತ ಹ್ಯಾಂಡ್ ಸಮ್ ಮುಖಗಳಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ ! ವಿಶ್ವದಲ್ಲೇ ಟಾಪ್ ತ್ರೀ ಯಲ್ಲಿ ಭಾರತದ ಹಾಟ್ ನಟ !
ಇದಕ್ಕಾಗಿ ಅವರು ಹಿಂದಿಕ್ಕಿರುವುದು ಎಂತೆಂತಹ ಘಟಾನುಘಟಿಗಳನ್ನು ಗೊತ್ತೇ ? ಜಾನಿ ಡೆಪ್ , ಹ್ಯು ಜ್ಯಾಕ್ ಮ್ಯಾನ್ , ಬ್ರಾಡ್ ಪಿಟ್ ಹಾಗು ನಮ್ಮ ದಬಾಂಗ್ ಸ್ಟಾರ್ ಸಲ್ಮಾನ್ ರನ್ನು ಹೃತಿಕ್ ಹಿಂದಿಕ್ಕಿ ಈ ಪ್ರತಿಷ್ಠಿತ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಹಾಲಿವುಡ್ ಚಿರಯುವಕ ಟಾಮ್ ಕ್ರೂಸ್ ಹಾಗು ದ್ವಿತೀಯ ಸ್ಥಾನಿ ರಾಬರ್ಟ್ ಪ್ಯಾಟಿನ್ಸನ್ .
ತನ್ನ ಆಕರ್ಷಕ ಲುಕ್ , ಹಸಿರು ಕಣ್ಣುಗಳು ಹಾಗು ಸ್ಟಾರ್ ಪಟ್ಟದ ಜೊತೆ ವಿನಯ ಕೂಡ ಈ ಸೂಪರ್ ಸ್ಟಾರ್ ನ ಹೆಗ್ಗಳಿಕೆ . ಅದಕ್ಕೇ ಈ ವಿಶೇಷ ಗೌರವದ ಕುರಿತು ಕೇಳಿದಾಗ ಥಟ್ಟನೆ " ಇಷ್ಟು ದೊಡ್ಡ ಸ್ಥಾನ ಸಿಕ್ಕಿರುವುದು ನಿಜಕ್ಕೂ ನನ್ನನ್ನು ಇನ್ನಷ್ಟು ವಿನೀತನನ್ನಾಗಿಸಿದೆ. ಇದೆಲ್ಲ ಸಾಧ್ಯವಾಗಿದ್ದು ನನ್ನ ಅಭಿಮಾನಿಗಳಿಂದ. ಇದು ಅತಿ ದೊಡ್ಡ ಗೌರವ . ನನ್ನ ಅಭಿಮಾನಿಗಳಿಗೆ ನಾನು ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆ ...ನನ್ನ ನಗುವಿಗೆ ಈ ಸ್ಥಾನ ಸಿಕ್ಕಿರಬಹುದು. ಆದರೆ ಬೇರೆಯವರ ಮುಖದಲ್ಲಿ ನಗು ಅರಳಿಸುವುದು ನನ್ನ ಗುರಿ " ಎಂದು ಪ್ರತಿಕ್ರಿಯಿಸಿದ್ದಾರೆ.