ಮಣಿರತ್ನಂ-ಐಶ್ವರ್ಯ ರೈ ಹೊಸ ಚಿತ್ರಕ್ಕೆ ಭೂಮಿಕೆ ಸಿದ್ಧತೆ
ತಮಿಳು, ಹಿಂದಿಯಲ್ಲಿ ಹೊಸ ಸಿನಿಮಾ
ಚೆನ್ನೈ, ಮೇ 26: ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಹಾಗೂ ನಟಿ ಐಶ್ವರ್ಯಾ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾಹಿತಿ ಸಿನಿರಂಗದಲ್ಲಿ ಸುದ್ದಿ ಮಾಡುತ್ತಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಈ ಹಿಂದೆ ಮೂಡಿಬಂದಿದ್ದ "ಇರುವರ್", "ಗುರು" ಮತ್ತು "ರಾವಣ್" ಚಿತ್ರಗಳು ಯಶಸ್ವಿಯಾಗಿತ್ತು.
ಇತ್ತೀಚೆಗಷ್ಟೇ ಮಣಿರತ್ನಂ ನಿರ್ದೇಶನದಲ್ಲಿ ನಟ ಕಾರ್ತಿ ಅಭಿನಯದ "ಕಾಟ್ರು ವೆಲಿಯಿಡೈ" ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸೋಲುಂಡಿತ್ತು. "ಒ ಕಾದಲ್ ಕಣ್ಮಣಿ" ಚಿತ್ರದ ಯಶಸ್ಸನ್ನು "ಕಾಟ್ರು ವೆಲಿಯಿಡೈ" ಚಿತ್ರ ಗಳಿಸಿರಲಿಲ್ಲ. ಈ ಚಿತ್ರದಲ್ಲಿ ಮಣಿರತ್ನಂ ತಮ್ಮ ಹಳೆಯ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯಿಸಿದ್ದರು. ಐಶ್ವರ್ಯಾ ರೈ ಅಭಿನಯದ ಇತ್ತೀಚೆಗೆ ತೆರೆಕಂಡ "ಏ ದಿಲ್ ಹೈ ಮುಷ್ಕಿಲ್" ಚಿತ್ರ ಯಶಸ್ವಿಯಾಗಿತ್ತು.
ಇದೀಗ ಮತ್ತೊಮ್ಮೆ ಮೋಡಿ ಮಾಡಲು ಮಣಿರತ್ನಂ ತಯಾರಿ ನಡೆಸಿದ್ದು, ಐಶ್ವರ್ಯಾ ರೈ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಐಶ್ವರ್ಯಾ ರೈ ಕೂಡಾ ಈ ಚಿತ್ರದಲ್ಲಿ ನಟಿಸಲು ಸಹಮತ ಸೂಚಿಸಿದ್ದಾರೆಂಬುದು ಬಿಟೌನ್ ನಲ್ಲಿ ಹರಿದಾಡುತ್ತಿರುವ ಸುದ್ದಿ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ತಮಿಳು ಮತ್ತು ಹಿಂದಿಯಲ್ಲಿ ನಿರ್ಮಾಣವಾಗಲಿದೆ ಎನ್ನುವ ಮಾಹಿತಿಗಳಿವೆ.