ಬಾಲಿವುಡ್ನಲ್ಲಿ ನ್ಯೂಟನ್ ಮೋಡಿ
ಬಾಲಿವುಡ್ನಲ್ಲಿ ವೈವಿಧ್ಯ ಮಯ ಪಾತ್ರಗಳಲ್ಲಿ ಮಿಂಚಿರುವ ಪ್ರತಿಭಾವಂತ ನಟ ರಾಜ್ಕುಮಾರ್ ರಾವ್, ‘‘ನ್ಯೂಟನ್’ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ನ್ಯೂಟನ್ ಚಿತ್ರದ ಪೋಸ್ಟರ್ಗೆ ಚಿತ್ರಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.
‘ಸೀದಾ ಆದ್ಮಿ ಕಿ ಉಲ್ಟಿ ದುನಿಯಾ’ ಎಂಬ ಟ್ಯಾಗ್ಲೈನ್ ಹೊಂದಿರುವ ನ್ಯೂಟನ್ ಪಕ್ಕಾ ಕಾಮಿಡಿ ಚಿತ್ರವಾಗಿದೆ. ಜ್ವಲಂತ ರಾಜಕೀಯ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಕೂಡಾ ಇದರಲ್ಲಿದೆ. ಛತ್ತೀಸ್ಗಢದ ದಟ್ಟಾರಣ್ಯದ ನಡುವೆ ಇರುವ ನಕ್ಸಲ್ ಪೀಡಿತ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆಂದು ತೆರಳಿದ ಬಡಪಾಯಿ ಸರಕಾರಿ ನೌಕರನ ಕುರಿತಾದ ಕಥಾವಸ್ತುವನ್ನು ನ್ಯೂಟನ್ ಹೊಂದಿದೆ.
ಒಂದೆಡೆ ಭದ್ರತಾಪಡೆಗಳ ಕೆಂಗಣ್ಣಿಗೆ ಗುರಿಯಾಗುವ ಆತ, ಇನ್ನೊಂದೆಡೆ ಮಾವೋವಾದಿಗಳ ಬೆದರಿಕೆಯ ನಡುವೆ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆತ ಹೇಗೆ ಯಶಸ್ವಿಯಾಗಿ ನ್ಯಾಯಸಮ್ಮತ ಚುನಾವಣೆಯನ್ನು ನಿರ್ವಹಿಸುತ್ತಾನೆಂಬುದೇ ಚಿತ್ರದ ಕಥಾವಸ್ತುವಾಗಿದೆ.
ಅತ್ಯಂತ ನವಿರಾದ ಹಾಸ್ಯದಿಂದ ಕೂಡಿದ ನ್ಯೂಟನ್ನನ್ನು ಅಮಿತ್ ವಿ. ಮಸೂರ್ಕರ್ ನಿರ್ದೇಶಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಚಿತ್ರ ಆಗಸ್ಟ್ ವೇಳೆಗೆ ಬಿಡುಗಡೆಯಾಗಲಿದೆ.