ಸಲ್ಮಾನ್ ಚಿತ್ರದಲ್ಲಿ ಪ್ರಭಾಸ್?
ಬಾಕ್ಸ್ಆಫೀಸ್ನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದ ಬಾಹುಬಲಿ ಚಿತ್ರದ ನಾಯಕ ಪ್ರಭಾಸ್ ಈಗ ಬಾಲಿವುಡ್ನಲ್ಲೂ ಬಿಸಿಬಿಸಿ ಚರ್ಚೆಯ ವಿಷಯವಾಗಿದ್ದಾರೆ. ಟಾಲಿವುಡ್ನ ಸೂಪರ್ಹೀರೋಗಳ ಸಾಲಿನಲ್ಲಿರುವ ಪ್ರಭಾಸ್ರ ಬಾಲಿವುಡ್ ಪ್ರವೇಶ ಯಾವಾಗ ಎಂಬ ಪ್ರಶ್ನೆ ಬಿಟೌನ್ ಮಂದಿಯನ್ನು ಕಾಡುತ್ತಿದೆ. ಇದೀಗ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್, ಪ್ರಭಾಸ್ ಅಭಿನಯದಲ್ಲಿ ಬಾಲಿವುಡ್ ಚಿತ್ರವನ್ನು ನಿರ್ಮಿಸಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಪ್ರಭಾಸ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನ್ನೊಂದು ವದಂತಿಗಳ ಪ್ರಕಾರ ಪ್ರಭಾಸ್ ಅವರು ಸಲ್ಮಾನ್ಖಾನ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರಂತೆ. ಭಾರೀ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಇತರ ಯಾವುದೇ ಮಾಹಿತಿ ಈವರೆಗೆ ಬಹಿರಂಗಗೊಂಡಿಲ್ಲ.
ಈಗ ಪ್ರಭಾಸ್ ‘ಸಾಹೋ’ ಎಂಬ ತೆಲುಗುಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಅಭಿನಯಿಸಲಿದ್ದಾರೆ.