ಶ್ರದ್ಧಾ ಲೇಡಿ ಡಾನ್
ಆಶಿಕಿ, ಭಾಗಿಯಂತಹ ರೋಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶ್ರದ್ಧಾ ಕಪೂರ್ ಈಗ ಭೂಗತಲೋಕದ ಲೇಡಿಡಾನ್ ಆಗಿ ಬೆಳ್ಳಿತೆರೆಯಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಹಸೀನಾ ಪಾರ್ಕರ್ ಚಿತ್ರದಲ್ಲಿ ಆಕೆ ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹೀಂನ ಸಹೋದರಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.ದಾವೂದ್ ಪಾತ್ರದಲ್ಲಿ ಶ್ರದ್ಧಾ ಕಪೂರ್ಳ ಸಹೋದರ ಸಿದ್ಧಾರ್ಥ ಕಪೂರ್ ಅಭಿನಯಿಸುತ್ತಿದ್ದಾರೆಂಬುದು ಈ ಚಿತ್ರದ ಇನ್ನೊಂದು ವಿಶೇಷತೆ. ಚಿತ್ರದ ಟೀಸರ್ನಲ್ಲಿ ಶ್ರದ್ಧಾಳ ವಿಭಿನ್ನ ಗೆಟಪ್, ಚಿತ್ರದ ಕುರಿತ ಕುತೂಹಲವನ್ನು ಹೆಚ್ಚಿಸಿದೆ. ಅಪೂರ್ವ ಲಾಹಿರಿ ನಿರ್ದೇಶನದ ಈ ಚಿತ್ರದ ಆಗಸ್ಟ್ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಹಸೀನಾಳ ಪತಿ ಇಸ್ಮಾಯೀಲ್ ಪಾರ್ಕರ್, ದಾವೂದ್ನ ನಿಕಟವರ್ತಿಯಾಗಿದ್ದ. ಗ್ಯಾಂಗ್ವಾರ್ನಲ್ಲಿ ಇಸ್ಮಾಯೀಲ್ ಹತ್ಯೆಗೀಡಾದ ಬಳಿಕ ಹಸೀನಾ ಪಾರ್ಕರ್ ಭೂಗತಲೋಕದಲ್ಲಿ ಮುಂಚೂಣಿಗೆ ಬಂದಳೆನ್ನಲಾಗಿದೆ. ಹವಾಲಾ ಜಾಲದಲ್ಲಿ ಶಾಮೀಲಾಗಿದ್ದ ಆಕೆ, 2014ರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಳು. ಹಸೀನಾಳ ನಿಗೂಢ ವ್ಯಕ್ತಿತ್ವವನ್ನು ಈ ಚಿತ್ರದ ಮೂಲಕ ಅನಾವರಣಗೊಳಿಸುವ ಪ್ರಯತ್ನ ಮಾಡಿರುವುದಾಗಿ ನಿರ್ದೇಶಕಿ ಅಪೂರ್ವ ಲಾಹಿರಿ ಹೇಳಿಕೊಂಡಿದ್ದಾರೆ.