ಬರಲಿದೆ ಮಿಸ್ಟರ್ ಇಂಡಿಯಾ 2
ಎಂಬತ್ತರ ದಶಕದಲ್ಲಿ ತೆರೆಕಂಡ ಮಿಸ್ಟರ್ ಇಂಡಿಯಾ ಆಗ ಬಾಕ್ಸ್ಆಫೀಸ್ ಕೊಳ್ಳೆ ಹೊಡೆದಿತ್ತು. ‘ಬಾಲಿವುಡ್ ರಾಣಿ’ ಶ್ರೀದೇವಿ ಹಾಗೂ ಅನಿಲ್ಕಪೂರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರವು ಭಾರತದ ಪ್ರಪ್ರಥಮ ‘ಸಯನ್ಸ್ ಫಿಕ್ಷನ್’ ಚಿತ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 1987ರಲ್ಲಿ ಬಿಡುಗಡೆಯಾದ ಮಿಸ್ಟರ್ ಇಂಡಿಯಾ ಇಂದಿಗೂ ಚಿತ್ರಪ್ರೇಮಿಗಳ ಮನದಲ್ಲಿ ಹಸಿರಾಗಿಯೇ ಉಳಿದಿದೆ. ಇದೀಗ ಮೂವತ್ತು ವರ್ಷಗಳ ಸುದೀರ್ಘ ಅಂತರದ ಬಳಿಕ ಮಿಸ್ಟರ್ ಇಂಡಿಯಾ 2 ನಿರ್ಮಾಣವಾಗುತ್ತಿದೆ.
ಮಿಸ್ಟರ್ ಇಂಡಿಯಾ 2ನಲ್ಲೂ ಅನಿಲ್-ಶ್ರೀದೇವಿ ಅಭಿನಯಿಸಲಿದ್ದಾರೆ. ಇವರ ಜೊತೆಗೆ ಇನ್ನಿಬ್ಬರು ಜನಪ್ರಿಯ ಯುವತಾರಾ ಜೋಡಿ ಕೂಡಾ ಇರುವರು. ಮಿಸ್ಟರ್ ಇಂಡಿಯಾ ನಿರ್ಮಿಸಿದ್ದ ಶ್ರೀದೇವಿ ಪತಿ ಬೋನಿಕಪೂರ್, ಈ ಚಿತ್ರಕ್ಕೂ ಹಣ ಹೂಡಲಿದ್ದಾರೆ. ಆದರೆ ಚಿತ್ರದ ನಿರ್ದೇಶಕರು ಯಾರೆಂಬುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲವಂತೆ. ಮಿಸ್ಟರ್ ಇಂಡಿಯಾವನ್ನು ಶೇಖರ್ ಕಪೂರ್ ನಿರ್ದೇಶಿಸಿದ್ದರು. ಆದರೆ ಎರಡನೆ ಭಾಗವನ್ನು ತಾನು ನಿರ್ದೇಶಿಸುವುದಿಲ್ಲವೆಂದು ಸ್ವತಃ ಶೇಖರ್ ಕಪೂರ್ ಹೇಳಿಕೊಂಡಿದ್ದಾರೆ.
ಇಂಗ್ಲಿಷ್ ವಿಂಗ್ಲಿಷ್ ಮೂಲಕ ಚಿತ್ರರಂಗಕ್ಕೆ ವಾಪಸಾದ ಶ್ರೀದೇವಿ, ಆ ಚಿತ್ರದ ಮೂಲಕ ತನ್ನ ಪ್ರತಿಭೆಗೆ ಮಂಕು ಬಡಿದಿಲ್ಲವೆಂಬುದನ್ನು ಸಾಬೀತುಪಡಿಸಿದ್ದರು. ಕಳೆದ ವರ್ಷ ತೆರೆಕಂಡ ಪುಲಿ ಎಂಬ ಅದ್ದೂರಿ ಬಜೆಟ್ ಚಿತ್ರದಲ್ಲೂ ನಟಿಸಿದ್ದರು. ಆಕೆ ಅಭಿನಯಿಸಿರುವ ಬಾಲಿವುಡ್ ಚಿತ್ರ ‘ಮಾಮ್ ’ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ.