ಕಂಗನಾ ಈಗ ಸಿಮ್ರಾನ್
‘ಫ್ಯಾಶನ್’, ‘ಕ್ವೀನ್’, ‘ತನು ವೆಡ್ಸ್ ಮನು’ ಚಿತ್ರಗಳ ಮೂಲಕ ಬಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿರುವ ಕಂಗನಾ ರಾಣಾವತ್ ಈಗ ಮತ್ತೆ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ. ಆಕೆ ನಾಯಕಿಯಾಗಿರುವ ‘ಸಿಮ್ರಾನ್’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ಚಿತ್ರಪ್ರೇಮಿಗಳಿಂದ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ‘ಶಾಹಿದ್’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ಹನ್ಸ್ಲಾಲ್ ಮೆಹ್ತಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಳೆದ ವರ್ಷ ತೆರೆಕಂಡ ಅವರ ನಿರ್ದೇಶನದ ‘ಅಲಿಗರ್’ ಕೂಡಾ ವಿಮರ್ಶಕರು ಹಾಗೂ ಪ್ರೇಕ್ಷರರಿಂದಲೂ ಮುಕ್ತಕಂಠದ ಪ್ರಶಂಸೆ ಪಡೆದಿತ್ತು. ಆ ಚಿತ್ರದಲ್ಲಿ ಮನೋಜ್ಬಾಜಪೇಯಿ ನಾಯಕನಾಗಿ ನಟಿಸಿದ್ದರು.
ಕಂಗನಾ ಮೇಕಪ್ ಇಲ್ಲದೆಯೇ ನಟಿಸಿದ್ದ ‘ಕ್ವೀನ್’ ಚಿತ್ರ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿತ್ತು. ಇದೀಗ ‘ಸಿಮ್ರಾನ್’ನಲ್ಲೂ ಆಕೆ ಮೇಕಪ್ನಿಂದ ದೂರವುಳಿದಿದ್ದಾರೆ. ಸಿಮ್ರಾನ್ ಚಿತ್ರದಲ್ಲಿ ಗುಜರಾತಿ ಮೂಲದ ಕೆಲಸ ಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿಭಾವಂತ ನಟ ರಾಜ್ಕುಮಾರ್ ರಾವ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನರ್ಸ್ ಆಗಿದ್ದು, ಆನಂತರ ಬ್ಯಾಂಕ್ ದರೋಡೆಕೋರಳಾಗಿ ಕುಖ್ಯಾತಳಾದ ಬಂಡಿ ಸಂದೀಪ್ ಕೌರ್ ಎಂಬಾಕೆಯ ಜೀವನಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಅಪೂರ್ವ ಅಸ್ರಾಣಿ ಚಿತ್ರಕಥೆ ಬರೆದಿದ್ದಾರೆ. ಅಂದಹಾಗೆ ‘ಸಿಮ್ರಾನ್’ ಸೆಪ್ಟಂಬರ್ ತಿಂಗಳಲ್ಲಿ ತೆರೆಕಾಣುವುದು ಖಚಿತವಾಗಿದೆ.