ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಆಮಿರ್ ಖಾನ್ ಯಾಕಿಲ್ಲ?
ಬಾಕ್ಸ್ ಆಫೀಸ್ ಚಿಂದಿ ಮಾಡಿದ ದಂಗಲ್ ಸ್ಟಾರ್
ಹೊಸದಿಲ್ಲಿ, ಆ.25: ಇತ್ತೀಚೆಗಷ್ಟೇ ಫೋರ್ಬ್ಸ್ ಬಿಡುಗಡೆ ಮಾಡಿದ್ದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯ ಟಾಪ್ 10ನಲ್ಲಿ ಶಾರೂಕ್ ಖಾನ್, ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರ ಹೆಸರಿತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ 2000 ಕೋಟಿ ರೂ. ಗಳಿಸಿದ ‘ದಂಗಲ್’ ನಾಯಕ ಆಮಿರ್ ಖಾನ್ ಹೆಸರು ಈ ಪಟ್ಟಿಯಲ್ಲಿರಲಿಲ್ಲ.
ದಂಗಲ್ ಚಿತ್ರವೊಂದರಲ್ಲೇ ಆಮಿರ್ 175 ಕೋಟಿ ರೂ. ಗಳಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದ್ದು, ವಿಶ್ವದಲ್ಲೇ ನಟನೊಬ್ಬ ಪಡೆದ ಅತೀ ಹೆಚ್ಚುಸಂಭಾವನೆ ಇದಾಗಿದೆ ಎನ್ನಲಾಗಿದೆ. ಆದರೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅವರ ಹೆಸರಿಲ್ಲ.
“ಮಾಹಿತಿ ಹಂಚಿಕೊಳ್ಳದ ಕಾರಣ ಫೋರ್ಬ್ಸ್ ಪಟ್ಟಿಯಲ್ಲಿ ಇದುವರೆಗೂ ಆಮಿರ್ ಖಾನ್ ಹೆಸರು ಸೇರಿಲ್ಲ” ಎಂದು ಆಮಿರ್ ಖಾನ್ ರ ತಂಡ ಹೇಳಿದೆ.
ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯೆಟ್ಸ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂ. ಗಳಿಸಿದ ನಂತರ 2013ರಲ್ಲಿ ಆಮಿರ್ ರ ಹೆಸರು ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿತ್ತು.
ಸಿನೆಮಾ ವಿಷಯಗಳಲ್ಲೂ ಮಿ. ಪರ್ಫೆಕ್ಟ್ ಆಗಿರುವ ಆಮಿರ್ ಖಾನ್ ಗೆ ಫೋರ್ಬ್ಸ್ ಪಟ್ಟಿಯಲ್ಲಿ ಹೆಸರಿಲ್ಲದಿರುವುದು ದೊಡ್ಡ ವಿಷಯವೇ ಅಲ್ಲ ಎಂದು ಬಾಲಿವುಡ್ ಮಂದಿ ಅಭಿಪ್ರಾಯಪಡುತ್ತಾರೆ.