ಬಾಲ್ಡಿಯಾಗಲಿರುವ ಟೈಗರ್
ನೀಳಕೇಶದ ಡ್ಯಾಶಿಂಗ್ ಹೀರೋ ಟೈಗರ್ ಶ್ರಾಫ್ ಸದ್ಯದಲ್ಲೇ ಬಾಲ್ಡ್ ಆಗಲಿದ್ದಾರೆ. ಹೌದು. ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದ ‘ಭಾಗಿ 2’ ಚಿತ್ರಕ್ಕಾಗಿ ಅವರು ಈ ಹೊಸ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2016ರಲ್ಲಿ ತೆರೆಕಂಡ ‘ಭಾಗಿ’ ಚಿತ್ರದಲ್ಲಿ ಟೈಗರ್ ಶ್ರಾಫ್ ನಿರ್ವಹಿಸಿದ ಆ್ಯಕ್ಷನ್ ದೃಶ್ಯಗಳಿಗೆ ಬಾಲಿವುಡ್ ಪ್ರೇಕ್ಷಕರು ರೋಮಾಂಚಿತರಾಗಿದ್ದರು. ಅಷ್ಟೇ ಅಲ್ಲದೆ ಆ ಚಿತ್ರ ಕಳೆದ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿತ್ತು. ಅದೇ ಚಿತ್ರದ ಮುಂದುವರಿದ ಭಾಗವಾದ ‘ಭಾಗಿ 2’ನಲ್ಲಿ ಟೈಗರ್ ಶ್ರಾಫ್ ಎರಡು ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಪೂರ್ವಾರ್ಧದಲ್ಲಿ ಟೈಗರ್ ಶ್ರಾಫ್ ಅಮಾಯಕ ಹಾಗೂ ಹುಡುಗಾಟದ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ದ್ವಿತೀಯಾರ್ಧದಲ್ಲಿ ರೋಷತಪ್ತ ಆ್ಯಕ್ಷನ್ ಹೀರೋ ಆಗಿ ಗರ್ಜಿಸಲಿದ್ದಾರೆ.
ಟೈಗರ್ ಶ್ರಾಫ್ಹಾಗೂ ಸಾಜಿದ್ ಕಾಂಬಿನೇಶನ್ನಲ್ಲಿ ನಿರ್ಮಾಣಗೊಳ್ಳಲಿರುವ ಮೂರನೆ ಚಿತ್ರ ಇದಾಗಿದೆ. ಈ ಹಿಂದೆ ಇವರಿಬ್ಬರ ‘ಹೀರೋಪಂತಿ’ ಹಾಗೂ ‘ಭಾಗಿ’ ಎರಡೂ ಬಾಕ್ಸ್ ಆಫೀಸ್ನಲ್ಲಿ ಜಯಭೇರಿ ಬಾರಿಸಿದ್ದವು. ‘ಭಾಗಿ 2’ ಮೂಲಕ ಈ ಜೋಡಿ ಹ್ಯಾಟ್ರಿಕ್ ಸಾಧಿಸಲು ಸಜ್ಜಾಗಿದೆ.
ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಟೈಗರ್ಗೆ ನಾಯಕಿ ಯಾಗಿ ಉದಯೋನ್ಮುಖ ನಟಿ ದಿಶಾ ಪಟಾನಿ ನಟಿಸಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಟೈಗರ್ ಅಭಿಮಾನಿಗಳಲ್ಲಿ ಸಖತ್ ಕುತೂಹಲ ಮೂಡಿಸಿದೆ.