ಕತರ್ ನಲ್ಲಿ ನಿರ್ಮಾಣವಾಗುತ್ತಿದೆ ಬೇರೆಡೆಗೆ ಸಾಗಿಸಬಹುದಾದ ಸ್ಟೇಡಿಯಂ!
ಇದು 2022ರ ಫಿಫಾ ವರ್ಲ್ಡ್ ಕಪ್ ವಿಶೇಷ...
ದೋಹಾ, ಡಿ.1: ಮುಂದಿನ ಫಿಫಾ ವರ್ಲ್ಡ್ ಕಪ್ ಪಂದ್ಯಾಟ 2022ರಲ್ಲಿ ಕತರ್ ನಲ್ಲಿ ನಡೆಯಲಿದೆ. ಅದಕ್ಕಾಗಿ ಈಗಿಂದಲೇ ಸಿದ್ಧತೆಗಳು ಆರಂಭಗೊಂಡಿವೆ. ಕತರ್ ನ ದೋಹಾದಲ್ಲಿ ಅಬು ಅಬೌದ್ ಸ್ಟೇಡಿಯಂ ಈ ಪಂದ್ಯಾಟಕ್ಕಾಗಿ ವಿಶಿಷ್ಟ ರೀತಿಯಲ್ಲಿ ರೂಪುಗೊಳ್ಳಲಿದೆ. ಅದೆಷ್ಟು ವಿಶಿಷ್ಟವೆಂದರೆ ಈ ಸ್ಟೇಡಿಯಂನಲ್ಲಿ ಕಳಚಬಹುದಾದಂತಹ ಸೀಟುಗಳು ಹಾಗೂ ಗ್ಯಾಲರಿಗಳಿರುತ್ತವೆ. ಮೇಲಾಗಿ ಈ ಸ್ಟೇಡಿಯಂನ ವಿನ್ಯಾಸ ಅದೆಷ್ಟು ಭಿನ್ನ ಎಂದರೆ ಇಡೀ ಸ್ಟೇಡಿಯಂನ ಎಲ್ಲಾ ಭಾಗಗಳನ್ನು ಕಳಚಿ ಬೇರೊಂದೆಡೆ ಜೋಡಿಸಬಹುದಾಗಿದೆ ಅಥವಾ ಸಣ್ಣ ಸಣ್ಣ ಸ್ಟೇಡಿಯಂಗಳನ್ನೂ ನಿರ್ಮಿಸಲು ಉಪಯೋಗಿಸಬಹುದಾಗಿದೆ. 2022ರ ಫಿಫಾ ಪಂದ್ಯಾಟಕ್ಕೆ ಮುಂಚಿತವಾಗಿ ಬಿಡುಗಡೆಯಾಗುತ್ತಿರುವ ಏಳನೇ ಸ್ಟೇಡಿಯಂ ವಿನ್ಯಾಸ ಇದಾಗಿದೆ.
ಈ ಸ್ಟೇಡಿಯಂ ವಿನ್ಯಾಸಕ್ಕೆ ಗ್ಲೋಬರ್ ಸಸ್ಟೆನಿಬಿಲಿಟಿ ಅಸೆಸ್ಮೆಂಟ್ ಸಿಸ್ಟಂ ಪ್ರಮಾಣಪತ್ರವೂ ದೊರೆಯಲಿದೆ. ಮೊಡ್ಯುಲರ್ ಬಿಲ್ಡಿಂಗ್ ಬ್ಲಾಕುಗಳನ್ನು ಬಳಸಿ ಸೀಟುಗಳು, ಗ್ಯಾಲರಿ, ಶೌಚಾಲಯ ಮತ್ತಿತರ ಸೌಲಭ್ಯಗಳನ್ನು ನಿರ್ಮಿಸಲಾಗುವುದು.
ರಸ್ ಅಬು ಅಬೌದ್ ಸ್ಟೇಡಿಯಂನಲ್ಲಿ ಒಟ್ಟು 40,000 ಜನರಿಗೆ ಕುಳಿತುಕೊಳ್ಳುವ ಸಾಮರ್ಥ್ಯವಿರಲಿದ್ದು, ಅದರ ನಿರ್ಮಾಣ ಕಾರ್ಯ ದೋಹಾದಲ್ಲಿ 2020ರಲ್ಲಿ ಪೂರ್ತಿಗೊಳ್ಳಲಿದೆ. ಇದು ಫಿಫಾಗಾಗಿ ಏಳನೇ ಸ್ಟೇಡಿಯಂ ಆಗಲಿದ್ದು, ಈ ಹಿಂದೆ ಅಂದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಅಲ್ ತುಮಮ ಸ್ಟೇಡಿಯಂ ವಿನ್ಯಾಸ ಬಿಡುಗಡೆಗೊಳಿಸಲಾಗಿದ್ದರೆ, ಮೇ ತಿಂಗಳಲ್ಲಿ ಎಮಿರ್ ಕಪ್ ಫೈನಲಿಗಾಗಿ ಖಲೀಫಾ ಅಂತಾರಾಷ್ಟ್ರೀಯ ಸ್ಟೇಡಿಯಂ ಪೂರ್ತಿಗೊಂಡಿತ್ತು.
ಸ್ಟೇಡಿಯಂಗಳ ನಿರ್ಮಾಣ ಕಾರ್ಯದಲ್ಲಿ ಕತರ್ ಸುಮಾರು 20 ಲಕ್ಷ ಏಷ್ಯಾದ ವಲಸಿಗ ಕಾರ್ಮಿಕರನ್ನು ತೊಡಗಿಸಿಕೊಂಡಿದೆ.
2022ರ ಫಿಫಾ ವರ್ಲ್ಡ್ ಕಪ್ ಪಂದ್ಯಾವಳಿಯಲ್ಲಿ ಅತಿಥೇಯ ರಾಷ್ಟ್ರ ಎಂಬ ನೆಲೆಯಲ್ಲಿ ಕತರ್ ಭಾಗವಹಿಸಲಿದೆಯಾದರೂ 2018ರ ಫಿಫಾ ಕಪ್ ಡ್ರಾಗಾಗಿ ಅರ್ಹತೆ ಪಡೆಯಲು ಅದು ವಿಫಲವಾಗಿದೆ.