ದೀಪಾವಳಿ ಪ್ರಯುಕ್ತ ಪ್ರಯಾಣಿಕರಿಗೆ ಎಮಿರೇಟ್ಸ್ ಏರ್ಲೈನ್ಸ್ ವಿಶೇಷ ಕೊಡುಗೆ
ದುಬೈ,ಅ.14: ‘ದೀಪಾವಳಿ’ ಹಾಗೂ ಅಮೆರಿಕನ್ನರ ‘ಥ್ಯಾಂಕ್ಸ್ಗಿವಿಂಗ್’ ಹಬ್ಬಗಳ ಸಂದರ್ಭಗಳಲ್ಲಿ ತನ್ನ ಪ್ರಯಾಣಿಕರಿಗೆ ರಿಯಾಯಿತಿ ದರದ ಪ್ರಯಾಣದ ಕೊಡುಗೆಯನ್ನು ದುಬೈ ಮೂಲದ ಎಮಿರೇಟ್ಸ್ ಏರ್ಲೈನ್ಸ್ ರವಿವಾರ ಪ್ರಕಟಿಸಿದೆ.
ಈ ಕೊಡುಗೆಯಡಿ ಅಕ್ಟೋಬರ್ 28ರವರೆಗೆ ಪ್ರಯಾಣಿಕರು ತಮ್ಮ ಟಿಕೆಟ್ಗಳನ್ನು ಬುಕಿಂಗ್ ಮಾಡಬಹುದಾಗಿದ್ದು, ಅವರು 2019ರ ಎಪ್ರಿಲ್ 30ರವರೆಗೆ ಪ್ರಯಾಣಿಸಬಹುದಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಬಂಧುಗಳನ್ನು ಭೇಟಿಯಾಗಲು ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿರಿಗೆ ಈ ಕೊಡುಗೆ ಲಭ್ಯವಿದೆ. 1,205 ದಿರ್ಹಂನಿಂದ ಆರಂಭಗೊಂಡ ದರದಲ್ಲಿ ಮುಂಬೈಗೆ, 1,265 ದಿರ್ಹಂನಿಂದ ಆರಂಭಗೊಂಡು ದಿಲ್ಲಿಗೆ , 1105 ದಿರ್ಹಂನಿಂದ ಆರಂಭಗೊಂಡು ಹೈದರಾಬಾದ್ಗೆ ಹಾಗೂ 1,165 ದಿರ್ಹಂನಿಂದ ಆರಂಭಗೊಂಡ ದರದಲ್ಲಿ ಅಹ್ಮದಾಬಾದ್ಗೆ ಇಕಾನಮಿ ದರ್ಜೆಯಲ್ಲಿ ಪ್ರಯಾಣಿಸಬಹುದಾಗಿದೆ.
ಬ್ಯುಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರು, 3605 ದಿರ್ಹಂನಿಂದ ಮೊದಲ್ಗೊಂಡು ಮುಂಬೈಗೆ, 3705 ದಿರ್ಹಂನಿಂದ ಮೊದಲ್ಗೊಂಡು ಮುಂಬೈಗೆ ಹಾಗೂ 3395 ದಿರ್ಹಂನಿಂದ ಮೊದಲ್ಗೊಂಡು ಹೈದರಾಬಾದ್ಗೆ ಮತ್ತು 4775 ದಿರ್ಹಂನಿಂದ ಮೊದಲ್ಗೊಂಡ ದರಗಳಲ್ಲಿ ಅಹ್ಮದಾಬಾದ್ಗೆ ಪ್ರಯಾಣಿಸಬಹುದಾಗಿದೆ.
ನವೆಂಬರ್ 7ರಿಂದ 10ರವರೆಗೆ ಎಮಿರೇಟ್ಸ್ ಏರ್ಲೈನ್ಸ್ ಪ್ರಯಾಣಿಕರಿಗೆ ವಿಶೇಷವಾದ ದೀಪಾವಳಿ ಖಾದ್ಯಗಳನ್ನು ಕೂಡಾ ನೀಡಲಾಗುವುದು. ದುಬೈಯಿಂದ ಭಾರತಕ್ಕೆ ಪ್ರಯಾಣಿಸುವ ಏಮಿರೇಟ್ಸ್ ಏರ್ಲೈನ್ಸ್ನ ಎಲ್ಲಾ ವಿಮಾನಗಳಲ್ಲಿ ಈ ವಿಶೇಷ ಖಾದ್ಯಗಳು ಲಭ್ಯವಿರಲಿವೆ.