ಸೌದಿ ರಾಜ, ಯುವರಾಜರಿಂದ ಖಶೋಗಿ ಪುತ್ರ, ಸೋದರನ ಭೇಟಿ
ರಿಯಾದ್, ಅ. 24: ಸೌದಿ ಅರೇಬಿಯದ ದೊರೆ ಸಲ್ಮಾನ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹತ್ಯೆಗೀಡಾದ ಪತ್ರಕರ್ತ ಜಮಾಲ್ ಖಶೋಗಿಯ ಕುಟುಂಬ ಸದಸ್ಯರನ್ನು ರಾಜಧಾನಿ ರಿಯಾದ್ನಲ್ಲಿ ಮಂಗಳವಾರ ಭೇಟಿಯಾದರು ಎಂದು ಸರಕಾರಿ ಮಾಧ್ಯಮ ತಿಳಿಸಿದೆ.
ಸೌದಿ ಆಡಳಿತಗಾರರು ಖಶೋಗಿ ಪುತ್ರ ಸಲಾಹ್ ಮತ್ತು ಸಹೋದರ ಸಾಹಿಲ್ರನ್ನು ರಾಜ ಅರಮನೆಯಲ್ಲಿ ಭೇಟಿಯಾದರು ಎಂದು ಸರಕಾರಿ ಒಡೆತನದ ಸುದ್ದಿಸಂಸ್ಥೆ ಎಸ್ಪಿಎ ತಿಳಿಸಿದೆ.
ಈ ಸಂದರ್ಭದಲ್ಲಿ ದೊರೆ ಮತ್ತು ಯುವರಾಜ ಪತ್ರಕರ್ತನ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಸಂತಾಪ ವ್ಯಕ್ತಪಡಿಸಿದರು.
2017ರಲ್ಲಿ ಮುಹಮ್ಮದ್ ಬಿನ್ ಸಲ್ಮಾನ್ರನ್ನು ದೊರೆ ಸಲ್ಮಾನ್ ಯುವರಾಜನಾಗಿ ನೇಮಿಸಿದ ಸ್ವಲ್ಪ ಸಮಯದ ಬಳಿಕ, ಜಮಾಲ್ ಖಶೋಗಿ ಅಮೆರಿಕದ ವರ್ಜೀನಿಯದಲ್ಲಿ ನೆಲೆಸಿರುವುದನ್ನು ಸ್ಮರಿಸಬಹುದಾಗಿದೆ.
ಯಾರೇ ಆಗಿರಲಿ, ಉತ್ತರದಾಯಿತ್ವ ನಿರ್ಧಾರ: ಸೌದಿ
ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಕಾರಣರಾದವರು ಹಾಗೂ ತಮ್ಮ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲರಾದವರು, ಯಾರೇ ಆಗಿರಲಿ, ಅವರನ್ನು ಸೌದಿ ಅರೇಬಿಯ ಉತ್ತರದಾಯಿಗಳನ್ನಾಗಿಸುವುದು ಎಂದು ಸೌದಿ ಸಚಿವ ಸಂಪುಟ ಹೇಳಿದೆ.
ದೊರೆ ಸಲ್ಮಾನ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೌದಿ ಪ್ರೆಸ್ ಏಜನ್ಸಿ ತಿಳಿಸಿದೆ.