ದುಬೈ: ಅಂತರಾಷ್ಟ್ರೀಯ ಡುಕಾಟಿ ಚಾಂಪಿಯನ್ ಶಿಪ್ ಬೈಕ್ ರೇಸಿನಲ್ಲಿ ಮೂಡಬಿದ್ರೆಯ ನಾಸಿರ್ ಸಯ್ಯದ್ ಗೆ ತೃತೀಯ ಸ್ಥಾನ
ದುಬೈ , ನ. 18 : ದುಬೈ ಮೋಟಾರ್ ಸಿಟಿಯಲ್ಲಿ ನವೆಂಬರ್ 17ರಂದು ನಡೆದ ಅಂತಾರಾಷ್ಟ್ರೀಯ ಡುಕಾಟಿ 959 ಚಾಂಪಿಯನ್ ಶಿಪ್ ಸೂಪರ್ ಸ್ಪೋರ್ಟ್ಸ್ ಬೈಕ್ ರೇಸಿನಲ್ಲಿ ಕನ್ನಡಿಗ ನಾಸಿರ್ ಸೈಯದ್ ತೃತೀಯ ಸ್ಥಾನ ಗೆದ್ದಿದ್ದಾರೆ. 12 ದೇಶದ ಸುಮಾರು 16 ಸ್ಪರ್ಧಿಗಳು ಭಾಗವಹಿಸಿದ್ದ ಈ ರೋಚಕ ಬೈಕ್ ರೇಸಿನಲ್ಲಿ ಅನಿವಾಸಿ ಕನ್ನಡಿಗ ಉದ್ಯಮಿ ಹಾಗು ಖ್ಯಾತ ಬೈಕ್ ರೇಸಿಗ ನಾಸಿರ್ ತೃತೀಯ ಸ್ಥಾನ ಪಡೆದಿದ್ದಾರೆ. ಇಟಲಿಯ ಸಾಷ್ಕ ಪ್ರಥಮ ಸ್ಥಾನ ಪಡೆದರೆ ಎರಡನೇ ಸ್ಥಾನವನ್ನು ಯುಎಇ ದೇಶದ ನಾಸಿರ್ ಅಲ್ ಶೀಬಾ ಪಡೆದರು. ನಾಸಿರ್ ಸಯ್ಯದ್ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಸಯ್ಯದ್ ಮೊಹಿದಿನ್ ಅವರ ಸುಪುತ್ರ.
ನವೆಂಬರ್ 2018 ರಿಂದ ಎಪ್ರಿಲ್ 2019 ರವೆರೆಗೆ ಒಟ್ಟು ಆರು ತಿಂಗಳು ಈ ಸ್ಪರ್ಧೆ ಒಟ್ಟು 12 ಹಂತಗಳಲ್ಲಿ ನಡೆಯಲಿದೆ. ನವೆಂಬರ್ 17ರಂದು ಎರಡು ರೇಸ್ ಗಳು ನಡೆದಿದ್ದು ಎರಡನೇ ರೇಸ್ ನಲ್ಲೂ ಮೊದಲ ಮೂರು ಸ್ಥಾನಿಗಳು ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ನಾಸಿರ್ ಸಯ್ಯದ್ ಡುಕಾಟಿ 959 ಬೈಕ್ ನಲ್ಲಿ ರೇಸ್ ಮಾಡಿದ್ದರು.
ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಸೂಪರ್ ಬೈಕ್ ರೇಸ್ ಗಳಲ್ಲಿ ಗಮನ ಸೆಳೆಯುವ ಸಾಧನೆ ಮಾಡಿರುವ ನಾಸಿರ್ ಅವರ ಪುತ್ರ ಅಬ್ದುಲ್ ಸಮೀ ಸಹ ಉದಯೋನ್ಮುಖ ಅಂತಾರಾಷ್ಟ್ರೀಯ ಸೂಪರ್ ಸ್ಪೋರ್ಟ್ಸ್ ಬೈಕ್ ರೇಸಿಗ . ಬಹರೈನ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಇತ್ತೀಚಿಗೆ ಆರಂಭವಾದ ಪ್ರತಿಷ್ಠಿತ ಬಹರೈನ್ ಸೂಪರ್ ಸ್ಪೋರ್ಟ್ ಚಾಂಪಿಯನ್ ಶಿಪ್ ಸೂಪರ್ ಸ್ಪೋರ್ಟ್ ಬೈಕ್ ರೇಸ್ ಮೊದಲ ಹಂತದ ಮೊದಲ ಹಾಗು ಎರಡನೇ ರೇಸ್ ಗಳಲ್ಲಿ ಸಮೀ ಪ್ರಥಮ ಸ್ಥಾನ ಪಡೆದು ಶುಭಾರಂಭ ಮಾಡಿದ್ದಾರೆ .