ಬಹರೈನ್ ಸೂಪರ್ ಸ್ಪೋರ್ಟ್ ಚಾಂಪಿಯನ್ಶಿಪ್ ಬೈಕ್ ರೇಸ್: ಸತತ 6 ರೇಸ್ಗಳಲ್ಲಿ ಮೂಡುಬಿದಿರೆ ಮೂಲದ ಅಬ್ದುಲ್ ಸಮಿ ಪ್ರಥಮ
ಬಹರೈನ್, ಜ.12: ಇಲ್ಲಿನ ಬಹರೈನ್ ಇಂಟರ್ನ್ಯಾಶನಲ್ ಸರ್ಕ್ಯೂಟ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಬಹರೈನ್ ಸೂಪರ್ ಸ್ಪೋರ್ಟ್ ಚಾಂಪಿಯನ್ ಶಿಪ್ ಸೂಪರ್ ಸ್ಪೋರ್ಟ್ ಬೈಕ್ ರೇಸ್ನ ಸತತ ಆರು ರೇಸ್ಗಳಲ್ಲಿ ಪ್ರಥಮ ಸ್ಥಾನಿಯಾಗುವ ಮೂಲಕ ಅಬ್ದುಲ್ ಸಮಿ ಸಯ್ಯದ್ ಚಾಂಪಿಯನ್ ಆಗುವತ್ತ ದಾಪುಗಾಲು ಹಾಕಿದ್ದಾರೆ. ಕಳೆದ ಡಿಸೆಂಬರ್ 11ರಂದು ಮೂರನೇ ಹಂತದ ಎರಡು ರೇಸ್ ಗಳು ನಡೆದಿದ್ದು, ಅವುಗಳಲ್ಲೂ ಸಮಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ಮೂಡುಬಿದಿರೆ ಮೂಲದ ದುಬೈಯ ಯುವ ಉದ್ಯಮಿ ಹಾಗೂ ಸ್ವತಃ ಬೈಕ್ ರೇಸ್ ಚಾಂಪಿಯನ್ ಸಯ್ಯದ್ ನಾಸಿರ್ ಅವರ ಪುತ್ರ. ಈಗ ಅಮೆರಿಕನ್ ಯುನಿವರ್ಸಿಟಿ ಆಫ್ ಶಾರ್ಜಾದಲ್ಲಿ ಆರ್ಥಿಕ ಆಡಳಿತ ವಿಷಯದಲ್ಲಿ ಪ್ರಥಮ ವರ್ಷದ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಸಮಿ ಈ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ್ದ ಅತ್ಯಂತ ಕಿರಿಯ ಸ್ಪರ್ಧಿ.
ಒಟ್ಟು ಆರು ಹಂತಗಳಲ್ಲಿ ರೇಸ್ ನಡೆಯಲಿದ್ದು, ಪ್ರತಿ ಹಂತದಲ್ಲಿ ಎರಡು ರೇಸ್ ಗಳಿರುತ್ತವೆ. ಈಗ ಮೂರನೇ ಹಂತದವರೆಗೆ ಆರು ರೇಸ್ ಗಳು ಮುಗಿದಿದ್ದು ಎಪ್ರಿಲಿಯ 125 ಸಿಸಿ ಬೈಕ್ ಚಲಾಯಿಸಿದ 18ರ ಹರೆಯದ ಅಬ್ದುಲ್ ಸಮಿ, ಈ ಎಲ್ಲ ರೇಸ್ ಗಳಲ್ಲಿ ಇತರ ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕೊನೆಯ ಹಾಗೂ ಆರನೇ ಹಂತ ಮುಂದಿನ ವರ್ಷ ಎಪ್ರಿಲ್ನಲ್ಲಿ ನಡೆಯಲಿದೆ. ಒಟ್ಟು ಒಂಬತ್ತು ದೇಶಗಳ ಸ್ಪರ್ಧಿಗಳು ಚಾಂಪಿಯನ್ಶಿಪ್ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಫೈಲ್ ಫೋಟೋ