ಸೌದಿಗರನ್ನು ವಜಾ ಮಾಡುವ ಕಂಪೆನಿಗಳಲ್ಲಿ ವಲಸಿಗರ ನೇಮಕಕ್ಕೆ ನಿಷೇಧ
ಸೌದಿ ಸಂಕಟ
ಜಿದ್ದಾ, ಮೇ 5: ಸೌದಿ ರಾಷ್ಟ್ರೀಯರನ್ನು ಕೆಲಸದಿಂದ ತೆಗೆಯುವ ಕಂಪೆನಿಗಳಿಗೆ ವಿದೇಶೀಯರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗುವುದಿಲ್ಲ ಎಂದು ಸೌದಿ ಅರೇಬಿಯದ ಕಾರ್ಮಿಕ ಸಚಿವ ಮುಫ್ರೆಝ್ ಅಲ್-ಹಕಬಾನಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರೂ ಕಂಪೆನಿಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುವಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಿಯಾದ್ನಲ್ಲಿ ಬುಧವಾರ ಕೊನೆಗೊಂಡ ಯುರೋಮನಿ ಸೌದಿ ಅರೇಬಿಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಖಾಸಗಿ ಕ್ಷೇತ್ರದಲ್ಲಿ ಸೌದಿಗಳು ಉದ್ಯೋಗ ಪಡೆಯಲು ಸಾಧ್ಯವಾಗುವಂತೆ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಖಾಸಗಿ ಕ್ಷೇತ್ರದಲ್ಲಿ 18 ಲಕ್ಷ ಸೌದಿ ಪ್ರಜೆಗಳು ಹಾಗೂ 89 ಲಕ್ಷ ವಲಸಿಗರು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು. ವಿದೇಶೀಯರ ಪೈಕಿ ಹೆಚ್ಚಿನವರು ಈಸ್ಟರ್ನ್ ಪ್ರಾವಿನ್ಸ್, ರಿಯಾದ್ ಮತ್ತು ಮಕ್ಕಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ರಿಯಾದ್ನಲ್ಲಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸೌದಿ ಪ್ರಜೆಗಳ ಪ್ರಮಾಣ 17 ಶೇಕಡ ಹಾಗೂ ಈಸ್ಟರ್ನ್ ಪ್ರಾವಿನ್ಸ್ನಲ್ಲಿ ಅದು 19 ಶೇಕಡ. ಸೌದಿ ರಾಷ್ಟ್ರೀಯರನ್ನು ದೊಡ್ಡ ಪ್ರಮಾಣದಲ್ಲಿ ಕೆಲಸದಿಂದ ತೆಗೆದುಹಾಕಲಾಗಿಲ್ಲ ಎಂದರು. ‘‘ಆದರೆ, ಯಾವುದೇ ಕಂಪೆನಿ ಇನ್ನು ಸೌದಿಗಳನ್ನು ಕೆಲಸದಿಂದ ತೆಗೆದುಹಾಕಿದರೆ ಅವುಗಳಿಗೆ ಬೇರೆ ನೇಮಕಾತಿಗಳನ್ನು ಮಾಡಲು ಅವಕಾಶ ನೀಡಲಾಗುವುದಿಲ್ಲ’’ ಎಂದರು.
ಖಾಸಗಿ ಕ್ಷೇತ್ರದಲ್ಲಿ ಸೌದಿಗಳ ನೇಮಕಾತಿ ಹಾಗೂ ಉಚ್ಚಾಟನೆಗಳನ್ನು ತನ್ನ ಸಚಿವಾಲಯವು ಪ್ರತಿ ವಾರ ಪರಾಮರ್ಶಿಸಲಿದೆ ಎಂದು ಅವರು ನುಡಿದರು.
ಸೌದಿ ಅರೇಬಿಯದ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಈಗಿನ 22 ಶೇಕಡದಿಂದ 30 ಶೇಕಡಕ್ಕೆ ಏರಬೇಕೆಂದು ತನ್ನ ಸಚಿವಾಲಯ ಬಯಸುತ್ತದೆ ಎಂದು ಅಲ್-ಹಕಬಾನಿ ತಿಳಿಸಿದರು.