ಆಸ್ಪತ್ರೆಯಿಂದಲೇ ಸಚಿವ ಸಂಪುಟ ಸಭೆ ನಡೆಸಿದ ಸೌದಿ ದೊರೆ
ರಿಯಾದ್ (ಸೌದಿ ಅರೇಬಿಯ), ಜು. 22: ಸೌದಿ ಅರೇಬಿಯದ ದೊರೆ ಸಲ್ಮಾನ್ ಮಂಗಳವಾರ ಆಸ್ಪತ್ರೆಯಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಇದಕ್ಕೂ ಒಂದು ದಿನ ಮೊದಲು, 84 ವರ್ಷದ ದೊರೆಯನ್ನು ಪಿತ್ತಕೋಶದ ಊತಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೊರೆಯ ಪರಿಸ್ಥಿತಿ ಸ್ಥಿರವಾಗಿದೆ ಎಂಬುದಾಗಿ ಮೂರು ಮೂಲಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೊರೆ ಸಲ್ಮಾನ್ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುವುದನ್ನು ತೋರಿಸುವ ವೀಡಿಯೊವೊಂದನ್ನು ಸೌದಿ ಅರೇಬಿಯದ ಸರಕಾರಿ ಟಿವಿಯಲ್ಲಿ ಮಂಗಳವಾರ ಸಂಜೆ ತೋರಿಸಲಾಯಿತು. ಧ್ವನಿಯಿರದ ವೀಡಿಯೊದಲ್ಲಿ ದೊರೆ ಮೇಜೊಂದರ ಹಿಂದಿನಿಂದ ಮೌನವಾಗಿ ಓದುತ್ತಾ ದಾಖಲೆಗಳನ್ನು ತಿರುವಿ ಹಾಕುತ್ತಿರುವುದು ಕಾಣಿಸಿದೆ.
ದೊರೆ ಸಲ್ಮಾನ್ ಮಾರ್ಚ್ 19ರಂದು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರು ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ದೇಶವನ್ನುದ್ದೇಶಿಸಿ ಐದು ನಿಮಿಷಗಳ ಕಾಲ ಟೆಲಿವಿಶನ್ನಲ್ಲಿ ಭಾಷಣ ಮಾಡಿದ್ದರು.
Next Story