ದುಬೈಯಲ್ಲಿ ಮಿನಿಬಸ್,ಟ್ರಕ್ ಭೀಕರ ಢಿಕ್ಕಿ: 2ಭಾರತೀಯರು,3 ಬಂಗಾಳಿಗಳ ಮೃತ್ಯು
ದುಬೈ,ಡಿಸೆಂಬರ್ 5: ಮಿನಿಬಸ್ ಮತ್ತು ಟ್ರಕ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಐವರು ಮೃತರಾದ ಘಟನೆ ನಡೆದಿದೆ. ಗರ್ಹೂದ್ ಸೇತುವೆ ಬಳಿ ಅಲ್ ರಬಾತ್ ರಸ್ತೆಯಲ್ಲಿ ರವಿವಾರ ಬೆಳ್ಳಂಬೆಳಗ್ಗೆ ದುರ್ಘಟನೆ ಸಂಭವಿಸಿದೆ. ಇಬ್ಬರು ಭಾರತೀಯರು ಮತ್ತು ಮೂವರು ಬಾಂಗ್ಲಾದೇಶಿಯರು ಮೃತರಾಗಿದ್ದು,ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಇವರೆಲ್ಲರೂ ಕ್ಲಿನ್ಕೊ ಕಂಪೆನಿಯ ಕಾರ್ಮಿಕರು ಆಗಿದ್ದು, ಮಿನಿಬಸ್ನಲ್ಲಿ ಒಟ್ಟು ಹತ್ತೊಂಬತ್ತು ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿ ತಿಳಿಸಿದೆ.
ಬೆಳಗ್ಗೆ ಐದು ಗಂಟೆಗೆ ರಾಷಿದಿಯ ಪೊಲೀಸ್ ಠಾಣೆಗೆ ಅಪಘಾತವಾದ ಮಾಹಿತಿ ಲಭಿಸಿತ್ತು ಎಂದು ಠಾಣೆಯ ನಿರ್ದೇಶಕ ಬ್ರಿಗೇಡಿಯರ್ ಸಾಯಿದ್ ಹಮದ್ ಬಿನ್ ಸಲ್ಮಾನ್ ಅಲ್ ಮಾಲಿಕ್ ತಿಳಿಸಿದ್ದಾರೆ. ಅಪಘಾತ ಸ್ಥಳದಲ್ಲಿಯೇ ನಾಲ್ವರು ಮೃತರಾಗಿದ್ದರೆ, ಇನ್ನೊಬ್ಬ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ.ಗಾಯಾಳುಗಳಲ್ಲಿ ನಾಲ್ವರ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ. ಸೂಚನೆ ನೀಡದೆ ವಾಹನವನ್ನು ತಿರುಗಿಸಿದ್ದು ಅಪಘಾತಕ್ಕೆ ಕಾರಣವೆಂದು ಬ್ರಿಗೇಡಿಯರ್ ಸಾಯಿದ್ ಹೇಳಿದ್ದಾರೆಂದು ವರದಿ ತಿಳಿಸಿದೆ.