ಅಬುಧಾಬಿ ಕೆ.ಸಿ.ಎಫ್. ವತಿಯಿಂದ ಮೆಹಬೂಬ್ ಸಖಾಫಿ ಕೀನ್ಯರಿಗೆ ಬೀಳ್ಕೊಡುಗೆ
ಅಬುಧಾಬಿ, ಅ. 17: ಕೆ.ಸಿ.ಎಫ್. ಕಾರ್ಯಾಚರಣೆಯಲ್ಲಿ ಯು.ಎ.ಇ. ಮೆಹಬೂಬ್ ಸಖಾಫಿ ಕೀನ್ಯ ಅವರು ತನ್ನ ಪ್ರವಾಸ ಜೀವನವನ್ನು ಕೊನೆಗೊಳಿಸಿ ತಾಯ್ನಾಡಿಗೆ ಮರಳುವಾಗ ಅಬುಧಾಬಿ ಕೆ.ಸಿ.ಎಫ್. ವತಿಯಿಂದ ಅವರನ್ನು ಹೃತ್ಪೂರ್ವಕವಾಗಿ ಬೀಳ್ಕೊಡಲಾಯಿತು.
ಕೆ.ಸಿ.ಎಫ್. ರಾಷ್ಟ್ರೀಯ ಸಮಿತಿ ನೇತಾರ ಕೆ.ಎಚ್. ಮುಹಮ್ಮದ್ ಕುಂಞಿ ಸಖಾಫಿ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕೋರಿದರು. ನಂತರ ಉದ್ಘಾಟನಾ ಭಾಷಣಗೈದ ಸಿದ್ದೀಕ್ ಸಖಾಫಿ, ಯಾವುದೇ ಪರಿಚಯವಿಲ್ಲದೆ ಸಂಘಟನೆಯ ಮೂಲಕ ಸಾವಿರಾರು ಜನರೊಂದಿಗೆ ಬೆರೆತು, ಪರಸ್ಪರ ಸ್ನೇಹವನ್ನು ಬೆಳೆಸಿ ಎಲ್ಲರ ಕಣ್ಮಣಿಯಾಗಿದ್ದ ಮೆಹಬೂಬ್ ಸಖಾಫಿ ಯವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಭಾಷಣಗೈದ ಇಬ್ರಾಹೀಂ ಬ್ರೈಟ್ ಮಾರ್ಬಲ್ , ಉಸ್ತಾದರ ಮರಳುವಿಕೆ ಎಲ್ಲರಿಗೂ ಬೇಸರ ತಂದಿದೆಯಾದರೂ ಅವರ ಮುಂದಿನ ಎಲ್ಲಾ ಯೋಜನೆಗಳಿಗೆ ಸಂಪೂರ್ಣ ಬೆಂಬಲ ತುಂಬಿದರಲ್ಲದೇ ಕೆ.ಸಿ.ಎಫ್.ಗೆ ಬೆನ್ನೆಲುಬಾಗಿ ತಾಯ್ನಾಡಿನಲ್ಲಿ ಸಹಕರಿಸುವರೆಂದು ಹೇಳಿದರು. ಕೆ.ಸಿ.ಎಫ್. ಅಬುಧಾಬಿ ಪ್ರಧಾನ ಕಾರ್ಯದರ್ಶಿ ಹಕೀಂ ತುರ್ಕಳಿಕೆ, ಕಬೀರ್ ಬಯಂಬಾಡಿ, ಹಫೀಳ್ ಸಯೀದ್ ಹನೀಫಿ ಹಾಗೂ ಅಬೂಬಕರ್ ಝುಹ್ರಿ ಶುಭಾಶಯ ಕೋರಿದರು. ನಂತರ ಅಬುಧಾಬಿ ಕೆ.ಸಿ.ಎಫ್. ವತಿಯಿಂದ ಮೆಹಬೂಬ್ ಸಖಾಫಿ ಯವರಿಗೆ ಒಂದು ಕಿರು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.