'ಭಾರತ ನರಳುತ್ತಿದೆ' ಅಭಿಯಾನ: ಪುತ್ತೂರಿನಲ್ಲಿ ಪ್ರಚಾರ ಕಾರ್ಯಕ್ರಮ
ಪುತ್ತೂರು,ನ.30 : ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಡಿ. 9 ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿರುವ `ಭಾರತ ನರಳುತ್ತಿದೆ' ಜನಜಾಗೃತಿ ಅಭಿಯಾನದ ಸಮಾರೋಪ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಪುತ್ತೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ ಎಂದು ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು. ಟಿ. ತೌಸಿಫ್ ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳು ಮತ್ತು ದುರಾಡಳಿತದ ವಿರುದ್ಧ ಯುವ ಕಾಂಗ್ರೆಸ್ನಿಂದ ಹಮ್ಮಿಕೊಂಡಿರುವ ಅಭಿಯಾನದ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ, ಬೀದಿ ನಾಟಕ, ಸಂಚಾರಿ ವಾಹನದಲ್ಲಿ ಎಲ್ಸಿಡಿ ಮೂಲಕ ಕೇಂದ್ರ ಸರ್ಕಾರದ ವೈಫಲ್ಯಗಳನ್ನುಜನತೆಗೆ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದರು.
ಸಮಾರೋಪವಾಗಿ ಮಂಗಳೂರು ಲಾಲ್ಬಾಗ್ನ ಕರಾವಳಿ ಉತ್ಸವ ಮೈದಾನದಿಂದ ಯುವ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಪಂಜಿನ ಮೆರವಣಿಗೆ ಹೊರಟು ಬಲ್ಮಠ ಮೈದಾನಕ್ಕೆ ತಲುಪಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ರಾಜ್ಯ ಕಾಂಗ್ರೆಸ್ ಪ್ರಮುಖರು, ಯುವ ಕಾಂಗ್ರೆಸ್ನ ರಾಜ್ಯ, ರಾಷ್ಟ್ರೀಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಸುಳ್ಯ, ಪುತ್ತೂರು, ವಿಟ್ಲ, ಉಪ್ಪಿನಂಗಡಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ 15 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪುತ್ತೂರಿನಿಂದ 1500 ಕ್ಕೂ ಮಿಕ್ಕಿ ಕಾರ್ಯಕರ್ತರು ಬಸ್ಸುಗಳಲ್ಲಿ ಹಾಗೂ ವಿವಿಧ ವಾಹನಗಳಲ್ಲಿ ತೆರಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಲೀಂ ಪಾಪು, ಪ್ರಧಾನ ಕಾರ್ಯದರ್ಶಿಗಳಾದ ಹನೀಫ್ ಪುಂಚತ್ತಾರು, ಸಂತೋಷ್ ಕುಮಾರ್, ಸನತ್ಕುಮಾರ್ ರೈ ಏಳ್ನಾಡುಗುತ್ತು ಉಪಸ್ಥಿತರಿದ್ದರು.