ಕಾರು ಢಿಕ್ಕಿ: ಮಹಿಳೆ ಮೃತ್ಯು
ಹೆಬ್ರಿ, ಫೆ.17: ಮುದ್ರಾಡಿ ಗ್ರಾಮದ ಮದಗ ಎಂಬಲ್ಲಿ ಫೆ.16ರಂದು ರಾತ್ರಿ ವೇಳೆ ಓಮ್ನಿ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಜಲಜ ಪೂಜಾರ್ತಿ (65) ಎಂದು ಗುರುತಿಸಲಾಗಿದೆ. ಮುದ್ರಾಡಿ ಯಲ್ಲಿ ಯಕ್ಷಗಾನ ನೋಡಲು ಮನೆಯಿಂದ ಹೊರಟ ಜಲಜ ಪೂಜಾರ್ತಿಗೆ ಸೀತಾನದಿ ಕೈಕಂಬ ಕಡೆಯಿಂದ ಮುದ್ರಾಡಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಹಿಂದಿನಿಂದ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story