ಬಾಲ ಕಾರ್ಮಿಕರ ಬಳಕೆ ಶಿಕ್ಷಾರ್ಹ ಅಪರಾಧ: ನ್ಯಾ.ವೆಂಕಟೇಶ್ ನಾಯ್ಕ
ಕುಂದಾಪುರ, ಜೂ.12: ಯಾವುದೇ ಉದ್ಯಮಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದು, ದುಡಿಸುವುದು ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕಾಗಿ 50,000 ರೂ.ಗಳವರೆಗಿನ ದಂಡ ಹಾಗೂ 2 ವರ್ಷದೊಳಗಿನ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಟಿ. ಹೇಳಿದ್ದಾರೆ.
ಮಂಗಳವಾರ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸಂಘ, ವಕೀಲರ ಸಂಘ ಉಡುಪಿ ಹಾಗೂ ಭಂಡಾರ್ಕಾರ್ಸ್ ಆರ್ಟ್ಸ್ ಎಂಡ್ ಸಾಯನ್ಸ್ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬಡತನ, ಅನಕ್ಷರತೆ ಮತ್ತು ಪೋಷಕರ ಆರ್ಥಿಕ ದುಸ್ಥಿತಿಯಿಂದ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಪಟಾಕಿ ತಯಾರಿಕೆ, ಸಿಮೆಂಟ್ ಉದ್ಯಮ, ರೈಲ್ವೆ ಕಾಮಗಾರಿ ಮುಂತಾದ ಅಪಾಯಕಾರಿ ಉದ್ದಿಮೆಗಳಲ್ಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಇಂತಹ ಸಂಸ್ಥೆಗಳ ಮಾಲಕರಿಗೆ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂದವರು ನುಡಿದರು.
ಬಡತನ, ಅನಕ್ಷರತೆ ಮತ್ತು ಪೋಷಕರ ಆರ್ಥಿಕ ದುಸ್ಥಿತಿಯಿಂದ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಪಟಾಕಿ ತಯಾರಿಕೆ, ಸಿಮೆಂಟ್ ಉದ್ಯಮ, ರೈಲ್ವೆ ಕಾಮಗಾರಿ ಮುಂತಾದ ಅಪಾಯಕಾರಿ ಉದ್ದಿಮೆಗಳಲ್ಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಇಂತಹ ಸಂಸ್ಥೆಗಳ ಮಾಲಕರಿಗೆ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂದವರು ನುಡಿದರು. ಬಾಲ ಕಾರ್ಮಿಕ ಕಾನೂನಿನ ಕುರಿತು ಎಲ್ಲರೂ ಅರಿವು ಹೊಂದಿರಬೇಕು. ತಮ್ಮ ಸುತ್ತಮುತ್ತಲಿನ ಉದ್ದಿಮೆಗಳಲ್ಲಿ ಬಾಲ ಕಾರ್ಮಿಕರು ಕಂಡರೆ ಕೂಡಲೇ ಸಮೀಪದ ಪೊಲೀಸ್ ಠಾಣೆ ಅಥವಾ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕಡ್ಡಾಯ ಶಿಕ್ಷಣ ಹಕ್ಕು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಬಾಲ ಕಾರ್ಮಿಕರಿಗೆ ಪುರ್ನವಸತಿ, ಮಕ್ಕಳ ಕಲ್ಯಾಣ ನಿಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಘಟನೆಗಳು ಸರಕಾರದೊಂದಿಗೆ ಕೈ ಜೋಡಿಸಬೇಕಿದೆ. ಮಕ್ಕಳು ಬೆಳಯುವ ಪರಿಸರ ಉತ್ತಮವಾಗಿದ್ದರೆ ಮಕ್ಕಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳ ಸ್ಥಿತಿ ಚೆನ್ನಾಗಿದ್ದರೆ ದೇಶದ ಅಭಿವೃದ್ದಿ ಸಾಧ್ಯ ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಪ್ರಕಾಶ್, ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ದತಿ ನಿಷೇಧ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು. ಕುಂದಾಪುರ ಸಹಾಯಕ ಆಯುಕ್ತ ಭೂಬಾಲನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ, ಹಿರಿಯ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಕುಂದಾಪುರ ಡಿವೈಎಸ್ಪಿದಿನೇಶ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಕುಂದಾಪುರ ವಕೀಲರ ಸಂಘದ ಕಾರ್ಯದರ್ಶಿ ಪ್ರಮೋದ್ ಹಂದೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಬಿ ಪುರ್ಟಡೋ, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ. ನಾರಾಯಣ ಶೆಟ್ಟಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ. ಗೊಂಡ, ಸಂಪನ್ಮೂಲ ವ್ಯಕ್ತಿ ಕಾರ್ಮಿಕ ನಿರೀಕ್ಷಕ ರಾಮಮೂರ್ತಿ ಉಪಸ್ಥಿತರಿದ್ದರು.
ಪ್ರಭಾರ ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ್ ಜೋಗೂರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸಂಘದ ಯೋಜನಾ ನಿರ್ದೇಶಕ ಪ್ರಬಾಕರ್ ಅಚಾರ್ ನಿರೂಪಿಸಿದರು.
ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಅರಿವು ಮೂಡಿಸಲು ನಮ್ಮ ಕಲಾಕೇಂದ್ರ ಕೋಟೇಶ್ವರ ಇವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.