ಮುಖ್ಯಮಂತ್ರಿ ವಿರುದ್ಧ ರಾಜದ್ರೋಹದ ಪ್ರಕರಣ ದಾಖಲಿಸಿ: ಶಾಸಕ ಸುನೀಲ್ ಕುಮಾರ್ ಆಗ್ರಹ
ದಂಗೆ ಏಳುವಂತೆ ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಉಡುಪಿ, ಸೆ.21: ದಂಗೆ ಏಳುವಂತೆ ನಕ್ಸಲ್ ಪ್ರೇರಿತ ಪ್ರಚೋದನಕಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ರಾಜದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಶುಕ್ರವಾರ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಅಧಿಕಾರ ಉಳಿಸಿಕೊಳ್ಳಲು ಹಾಗೂ ಕುರ್ಚಿಯನ್ನು ಭದ್ರ ಪಡಿಸಿಕೊಳ್ಳಲು ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಸರಕಾರ ಉರುಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿಲ್ಲ. ಅವರ ಪಕ್ಷದೊಳಗಿನ ಭಿನ್ನಾ ಭಿಪ್ರಾಯಗಳಿಂದ ಸರಕಾರ ಉರುಳಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿಯಲ್ಲ ಎಂದು ಅವರು ತಿಳಿಸಿದರು.
ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಂವಿಧಾನ ವಿರೋಧಿ, ಉಡಾಫೆಯ ಹೇಳಿಕೆ ನೀಡಿ ರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಇವರು ಕೂಡಲೇ ಕ್ಷಮೆಯಾಚಿಸಬೇಕು, ಇಲ್ಲವೇ ಕುರ್ಚಿಯನ್ನು ತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರುಗಳಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಮುಖಂಡರಾದ ಶ್ಯಾಮಲಾ ಕುಂದರ್, ಶೀಲಾ ಕೆ.ಶೆಟ್ಟಿ, ವೀಣಾ ಶೆಟ್ಟಿ, ಯಶ್ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ರಾಘವೇಂದ್ರ ಕಿಣಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಸಂಧ್ಯಾ ರಮೇಶ್, ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.