ಅ.15: ಯೆನೆಪೊಯ ಕಾಲೇಜು ಅಸ್ಪತ್ರೆಯಲ್ಲಿ ವಿಶ್ವ ಮಾನಸಿಕ ರೋಗ ದಿನಾಚರಣೆ
ಮಂಗಳೂರು, ಅ.13: ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು, ಯೆನೆಪೊಯ ನರ್ಸಿಂಗ್ ಕಾಲೇಜು, ಯೆನೆಪೊಯ ಫಿಸಿಯೋಥೆರಪಿ ಕಾಲೇಜು ವತಿಯಿಂದ ಆ.15ರಂದು ಪೂ.11:30ಕ್ಕೆ ‘ವಿಶ್ವ ಹಿರಿಯರ ಹಾಗೂ ವಿಶ್ವ ಮಾನಸಿಕ ದಿನ’ವನ್ನು ಆಚರಿಸಲಾಗುತ್ತದೆ. ಯೆನೆಪೊಯ ವಿವಿ ಕುಲಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಉದ್ಘಾಟಿಸಲಿದ್ದಾರೆ. ಉಪಕುಲಪತಿ ಡಾ. ಸಿ.ವಿ. ರಘುವೀರ್, ಸಿಇಒ ಡಾ. ಮುಹಮ್ಮದ್ ಅಮೀನ್ ವಾಣಿ ಉಪಸ್ಥಿತರಿರುವರು.
ಹಿರಿಯ ನಾಗರಿಕರ ಮತ್ತು ತಂದೆ ತಾಯಿಯರ ಯೋಗಕ್ಷೇಮದ ಕುರಿತು ರಾಜ್ಯ ಸರಕಾರದ ಹೊಸ ಕಾಯ್ದೆಯ ಬಗ್ಗೆ ಹಿರಿಯ ನ್ಯಾಯವಾದಿ ಉದಯಾನಂದ ಮಾಹಿತಿ ನೀಡಲಿದ್ದಾರೆ. ಹಿರಿಯ ನಾಗರಿಕರಿಗೆ ಸಿಗುವ ಸರಕಾರದ ಸೌಲಭ್ಯಗಳ ಬಗ್ಗೆ ಸೀನಿಯರ್ ಸಿಟಿಜನ್ ಅಸೋಸಿಯೇಶನ್ನ ಕಾರ್ಯದರ್ಶಿ ರಮೇಶ್ ರಾವ್ ಮಾಹಿತಿ ನೀಡಲಿದ್ದಾರೆ. ಡಿಮೆನ್ಸಿಯಾದ ಬಗ್ಗೆ ಸ್ಫೂರ್ತಿ ಚಾರಿಟೇಬಲ್ ಟ್ರಸ್ಟ್ ತಯಾರಿಸಿದ ಚಲನಚಿತ್ರ ‘ಐ ಡೋಂಟ್ ಮಿಸ್ ಹಿಮ್’ ಅನ್ನು ಪ್ರದರ್ಶಿಸಲಾಗುತ್ತದೆ. ಇದೇ ವೇಳೆ ನರರೋಗ ವಿಭಾಗ, ಮಾನಸಿಕ ವಿಭಾಗ ಮತ್ತು ಹಿರಿಯ ನಾಗರಿಕರ ವಿಭಾಗದ ಆಶ್ರಯದಲ್ಲಿ ಮರೆವು ರೋಗಿಗಳ ನೋಂದಣಿ ಕಾರ್ಯ ನಡೆಯಲಿದೆ.
ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯು ಹಿರಿಯ ನಾಗರಿಕರ ಅತ್ಯುತ್ತಮ ಸೇವೆಗಾಗಿ ಇತ್ತೀಚೆಗೆ ರಾಜ್ಯ ಸರಕಾರದ ಪ್ರಶಸ್ತಿಯನ್ನು ಸ್ವೀಕರಿಸಿದೆ. ಹಿರಿಯ ನಾಗರಿಕರಿಗೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಜೀರಿಯಾಟ್ರಿಕ್ ಕ್ಲಿನಿಕ್ ಮೂಲಕ ಹಲವು ತಪಾಸಣೆಗಳನ್ನು ಉಚಿತವಾಗಿ ನಡೆಸುತ್ತಿವೆ. ಈಗಾಗಲೇ ನೆನಪು ಕೇಂದ್ರಗಳು ಈ ವಿಭಾಗಗಳಲ್ಲಿ ಕಾರ್ಯನಿರ್ವಸುತ್ತಿದೆ. ಹಾಗೇ ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಫಿಸಿಯೋಥೆರಪಿ ವಿಭಾಗದಿಂದ ಹಿರಿಯರಿಗಾಗಿ ಫಿಟ್ನೆಸ್ ಕೇಂದ್ರವನ್ನು ತೆರೆದು ಫಿಟ್ನೆಸ್ ವ್ಯಾಯಾಮಗಳನ್ನು ಕಲಿಸಲಿದೆ. ಕುಶಾಲಪ್ಪಅವರ ಸಹಯೋಗದಿಂದ ಯೋಗ ಕೇಂದ್ರವೂ ಕಾರ್ಯಾರಂಭಿಸಲಿದೆ.
ಯೆನೆಪೊಯ ಕಮ್ಯೂನಿಟಿ ನರ್ಸಿಂಗ್ ವಿಭಾಗದಿಂದ ಮನೆ ಮನೆಗೆ ಭೇಟಿ ಹಿರಿಯ ನಾಗರಿಕರ ಸಂಪೂರ್ಣ ತಪಾಸಣೆ ನಡೆಸುವ ಕಾರ್ಯಕ್ರಮ ನಡೆಸಲಿದೆ. ಅಲ್ಲದೆ ಮರೆವು ರೋಗದಿಂದ ಬಳಲುತ್ತಿರುವವರಿಗೆ ಬೇಕಾದ ಬುದ್ಧಿಶಕ್ತಿ ಚುರುಕುಗೊಳಿಸುವ ಕಾರ್ಯಕ್ರಮದ ಬಗ್ಗೆ ತಜ್ಞೆ ಡಾ. ಪ್ರಭಾ ಅಧಿಕಾರಿ ಮತ್ತು ಬ್ರೈಟ್ ಸಂಸ್ಥೆಯ ಸಂಸ್ಥಾಪಕ ಮೋಹನ್ರಾಜ್ ತರಬೇತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.