ಬಾವಿಗೆ ಅಚಾನಕ್ ಆಗಿ ಬಿದ್ದು ಬದುಕಿ ಬಂದ ಮಹಿಳೆ !
ಸಮಯಪ್ರಜ್ಞೆ ಮೆರೆದ ಪೊಲೀಸರು, ಸಾರ್ವಜನಿಕರು
ಮಂಗಳೂರು, ಅ.16: ನಗರದ ಬಜಾಲ್ ಸಮೀಪ ಮಹಿಳೆಯೊಬ್ಬರು ಮಂಗಳವಾರ ಅಚಾನಕ್ ಆಗಿ ಬಾವಿಗೆ ಬಿದ್ದಿದ್ದು, ಪೊಲೀಸರು ಹಾಗೂ ಸ್ಥಳೀಯರ ತುರ್ತು ಕಾರ್ಯಾಚರಣೆಯಿಂದ ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಪಡೀಲ್ ನಿವಾಸಿ ಸುಂದರಿ (63) ಬದುಕಿ ಬಂದ ಅದೃಷ್ಟವಂತೆ.
ಮಂಗಳವಾರ ಮಧ್ಯಾಹ್ನ ವೇಳೆ ಸುಂದರಿ ಅವರು ಬಾವಿಯ ಸುತ್ತ ಬೆಳೆದ ಹುಲನ್ನು ಕೊಯ್ಯುತ್ತಿದ್ದರು. ಈ ಸಂದರ್ಭ ಅಚಾನಕ್ ಆಗಿ 20 ಅಡಿ ಆಳದ ಬಾವಿಗೆ ಬಿದ್ದರು. ನೀರಿಗೆ ಬಿದ್ದು ಮೇಲೆ-ಕೆಳಗೆ ಹೋಗುವಾಗ ಸುಂದರಿ ಅವರಿಗೆ ನೀರಿನ ಪೈಪ್ ಕೈಗೆ ಸಿಕ್ಕಿದೆ. ಇದನ್ನು ಆಧಾರವಾಗಿಟ್ಟು, ನೀರಿನಿಂದ ಸ್ವಲ್ಪ ಮೇಲೆ ಬಂದು ಬೊಬ್ಬೆ ಹಾಕಿದರು. ಕೂಡಲೇ ಸ್ಥಳೀಯರು ಹಾಗೂ ಅಲ್ಲೇ ಸಾಗರ್ ಪೊಲೀಸ್ ವಾಹನದಲ್ಲಿದ್ದ ಪೊಲೀಸರು ಓಡಿ ಬಂದರು. ಬಳಿಕ ಕುರ್ಚಿ ಸಹಾಯದಿಂದ ಸುಂದರಿ ರಕ್ಷಣೆಗೆ ಮುಂದಾದರು. ಅದರಂತೆ ಕುರ್ಚಿಗೆ ಹಗ್ಗವನ್ನು ಕಟ್ಟಿ ಕೆಳಗಿಳಿಸಿದರು. ಅವರು ಕುರ್ಚಿಯಲ್ಲಿ ಕುಳಿತ ಮೇಲೆ ಮೆಲ್ಲನೆ ಮೇಲೆತ್ತಲಾಯಿತು.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಾಗರ್ ವಾಹನದ ರವೀಂದ್ರನಾಥ್ ರೈ, ಭರಣಿ ಬಿ. ಶೆಟ್ಟಿ ಭಾಗವಹಿಸಿದ್ದರು. ಸುಂದರಿ ಅವರನ್ನು ಮೇಲೆತ್ತಿದ್ದ ಬಳಿಕ ಅಗ್ನಿಶಾಮಕದಳ ಆಗಮಿಸಿತು.