---

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಸಾಹಿತ್ಯವೆನ್ನುವುದು ಒಂದು ನಿರ್ದಿಷ್ಟ, ಜಾತಿ, ಧರ್ಮ, ಜನಾಂಗಕ್ಕೆ ಸೀಮಿತವಾದುದಲ್ಲ: ಪ್ರೊ. ತುಕಾರಾಮ ಪೂಜಾರಿ

ಬಂಟ್ವಾಳ, ಡಿ. 7: "ಸಾಹಿತ್ಯವೆನ್ನುವುದು ಒಂದು ನಿರ್ದಿಷ್ಟ, ಜಾತಿ, ಧರ್ಮ, ಜನಾಂಗಕ್ಕೆ ಸೀಮಿತವಾದುದಲ್ಲ. ಇದು ಈ ಎಲ್ಲ ಗಡಿಯನ್ನು ಮೀರಿ ನಿಂತಿರುವ ಜ್ಞಾನ, ಶಿಸ್ತು, ಸಂಸ್ಕೃತಿ, ಸಂಸ್ಕಾರ ಮನುಷ್ಯ ಸಂಬಂಧವನ್ನು ಸದೃಢವಾಗಿರಲು ಸಾಹಿತ್ಯ ಸೇತು ಸಂಬಂಧವಿದ್ದಂತೆ. ಜೀವನ, ಪ್ರೀತಿಯನ್ನು ಬೆಳೆಸುವುದೇ ಸಾಹಿತ್ಯದ ಗುರಿಯಾಗಬೇಕು. ಜನರ ನಾಡಿಮಿಡಿತವನ್ನರಿತ ಸಾಹಿತಿ ನಿಜವಾದ ಸಾಹಿತಿ" ಬಂಟ್ವಾಳ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದ ಡಾ. ಎಫ್. ಎಚ್. ಒಡೆಯರ್ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಬಂಟ್ವಾಳ ತಾಲೂಕು 19ನೆ ಕನ್ನಡ ಸಾಹಿತ್ಯ ಸಮ್ಮೇಳನದ ಶುಕ್ರವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಮನೋಭಾವ ಬದಲಾಗದೇ ಕನ್ನಡವಾಗಲಿ ಇತರ ದೇಶಿ ಭಾಷೆಯಾಗಲಿ ಉಳಿಯಲು ಸಾಧ್ಯವಿಲ್ಲ. ಜ್ಞಾನ ಮತ್ತು ಸಂವಹನ ಮಾಧ್ಯಮವಾಗಿ ಇಂಗ್ಲಿಷ್ ಭಾಷೆಬೇಕೇ ಹೊರತು ಅದಕ್ಕಾಗಿ ನಮ್ಮನ್ನು ನಾವು ಮಾರಿಕೊಳ್ಳುವುದು ಸರಿಯಲ್ಲ ಎಂದರು. 

ಯುರೋಪಿಯನ್ ರಾಷ್ಟ್ರಗಳಲ್ಲಿ ಅವರು ತಪ್ಪಿಯೂ ಅವರ ಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ಮಾತನಾಡುವುದಿಲ್ಲ. ಯಾವಾಗ ನಮಗೆ ಇಂತಹ ಅಭಿಮಾನ ಹೃದಯದಲ್ಲಿ ಹುಟ್ಟುವುದಿಲ್ಲವೋ ಅಲ್ಲಿಯವರೆಗೆ ಕನ್ನಡದ ಏಳಿಗೆ ಕಷ್ಟಕರ. ನಮ್ಮ ಹಳ್ಳಿ ಮಕ್ಕಳು ಇಂಗ್ಲಿಷ್ ಭಾಷೆಯನ್ನಾಡುವಾಗ ವ್ಯಾಕರಣ ಶುದ್ಧವಿಲ್ಲವೆಂದು ತಾತ್ಸಾರದಿಂದ ಕಾಣುವ ಪೇಟೆ ಪಟ್ಟಣದ ಕಾನ್ವೆಂಟ್ ಮನೋಭಾವ ಬದಲಾಗಬೇಕು ಎಂದರು.

ಕನ್ನಡ ಭಾಷೆಯ ವ್ಯಾಪನೆ, ಜನಜೀವನದ ಸಂಸ್ಕಾರ, ಸಾಹಿತ್ಯ ರಚನೆಗೂ ಹಳ್ಳಿಯ ಶಿಕ್ಷಣವೇ ತಳಹದಿ. ಅಂದಿನ ಪ್ರಾಥಮಿಕ ಶಾಲೆಯ ಅಧ್ಯಾಪಕರು ಹೊಂದಿದ್ದ ಜ್ಞಾನ, ಜ್ಞಾನಾರ್ಜನೆಯ ಕಾಳಜಿ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿಲ್ಲ. ಅಂದಿನ ಒಬ್ಬೊಬ್ಬ ಅಧ್ಯಾಪಕನು ಜ್ಞಾನದ ತವನಿಧಿಯಂತಿದ್ದರು. ಅಂದು ಅವರಿಗೆ ಈಗಿನಂತೆ ಕಚೇರಿ ಕಾರ್ಯಭಾರದ ಒತ್ತಡವಿರದೆ ಮಕ್ಕಳಿಗೆ ಪಾಠ ಹೇಳುವುದೇ ಮುಖ್ಯ ಗುರಿಯಾಗಿತ್ತು. ಶಾಲಾ ಶಿಕ್ಷಕರಿಗೆ ಭದ್ರತೆ, ಬದ್ಧತೆಯಿತ್ತು. ಆದರೆ, ಇಂದಿನ ಅಧ್ಯಾಪಕರ ಸ್ಥಿತಿ ಹಾಗಿಲ್ಲ. ಇಲ್ಲಿ ಅಧ್ಯಾಪಕರ ತಪ್ಪಿಗಿಂತಲೂ ವ್ಯವಸ್ಥೆಯ ತಪ್ಪು ಎದ್ದು ಕಾಣುತ್ತಿದೆ ಎಂದು ವಿಷಾದಿಸಿದರು.  

ಸಾಹಿತ್ಯವೆಂದರೆ ಅರಳಿ ಬಾಡುವ ಸುಗಂಧರಹಿತ ಪುಷ್ಪವಲ್ಲ: 

ಸಾಹಿತ್ಯವೆಂದರೆ ಒಮ್ಮಿಂದೊಮ್ಮೆಗೆ ಅರಳಿ ಬಾಡುವ ಸುಗಂಧರಹಿತ ಪುಷ್ಪವಲ್ಲ. ಇದು ದೀರ್ಘ ಕಾಲದ ತಪಸ್ಸಿನ ಫಲ. ಇದು ಮೊಳಕೆಯೊಡೆದು ಚಿಗುರಿ, ಬಲಿತು ಬೆಳೆಯಬೇಕಾದರೆ ಸೂಕ್ತ ವಾತಾವರಣದ ಅಗತ್ಯವಿದೆ. ಅಂತಹ ವಾತಾವರಣವನ್ನು ಹುಟ್ಟು ಹಾಕಿ, ಪೋಷಿಸಿ ಬೆಳೆಸುವ ಕಾರ್ಯವಾಗಬೇಕು. ಇಂಥಹ ಆರೋಗ್ಯಕರ ವಾತಾವರಣ ಎಳವೆಯಲ್ಲಿ ದೊರೆತರೆ ಮಾತ್ರ ಅದು ಫಲಪ್ರದವಾಗುತ್ತದೆ ಎಂದ ಅವರು, ಒಂದು ಆರೋಗ್ಯಕರ ಮನಸ್ಸು ಚಿಗುರಿ ಅರಳಬೇಕಾದರೆ ಅದಕ್ಕೆ ಯೋಗ್ಯ ಮಾರ್ಗದರ್ಶನದ ಅಗತ್ಯವಿದೆ ಎಂದರು.

ಸಾಹಿತ್ಯ ರಚನೆಗೆ ಪೂರಕ ಆಕರವಾಗಬಲ್ಲ ಸಂಸ್ಕೃತಿಯಂತೆ ಪ್ರಕೃತಿಯೂ ಅಷ್ಟೆ ಮುಖ್ಯ. ಇಂದಿನ ಮಕ್ಕಳಿಗೆ ಇದರ ಕನಿಷ್ಠ ಪರಿಜ್ಞಾನವೂ ಇಲ್ಲ. ಯಾವುದೇ ಸಾಹಿತ್ಯ ಕಾಡು-ತೋಡು, ಪಚ್ಚೆ-ಪೈರು, ಗುಡ್ಡ-ಬೆಟ್ಟಗಳ ಹೊರತಾಗಿ ರಚನೆಯಾಗಲು ಸಾಧ್ಯವಿಲ್ಲ. ರಚನೆಯಾದರೂ ಅದು ರಸವಿಲ್ಲದ ಕಬ್ಬಿನ ಜಲ್ಲೆಯಷ್ಟೆ ಎಂದ ಅವರು, ಜಗತ್ ವಿಖ್ಯಾತ ಕವಿ ವಡ್ರ್ಸ್‍ವರ್ತನಿಂದ ಹಿಡಿದು ಷೇಕ್ಸ್‍ಪಿಯರ್‍ವರೆಗೆ ಎಲ್ಲರಿಗೂ ಚಿಕ್ಕಂದಿನಿಂದಲೇ ಹೂವು, ಕಾಯಿ, ಮೊಗ್ಗು, ಹಕ್ಕಿ, ಕುರಿ, ಮೇಕೆ, ಹಸು, ಕ್ವಿಕ್ ಮರಗಳು ಇವೆಲ್ಲದರ ನಡುವೆಯೇ ಸಾಹಿತ್ಯ ಪ್ರೇಮ ಮೊಳಕೆಯೊಡೆಯಲು ಕಾರಣವಾಯಿತು ಎಂದರು. 

ಇಂದಿನ ಮಕ್ಕಳು ಪೆಟ್ಟಿಗೆ ಸಂಸ್ಕೃತಿಯಲ್ಲಿ ಬೆಳೆಯುತ್ತಿದ್ದಾರೆ. ಹಿಂದಿನ ಮಕ್ಕಳು ಬಯಲು ಸಂಸ್ಕೃತಿಯಲ್ಲಿ ಪಳಗಿದ್ದರು. ಈಗ ನಾವಿಲ್ಲಿ ನಮ್ಮ ಪೀಳಿಗೆಗೆ ಎಂದೂ ಕ್ಷಮಿಸಲಾರದ ಘೋರ ಅನ್ಯಾಯವನ್ನು ಮಾಡುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದ ಅವರು, ಮುಂದಿನ ಪೀಳಿಗೆಗೆ ಮರಮಟ್ಟು, ನಾರು ಬೇರಿನ ಪರಿಚಯ ಮಾಡುವ, ನಿತ್ಯ ತಿನ್ನುವ ಅನ್ನದ ಕುರಿತು ಜ್ಞಾನವನ್ನು ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಉಪಭಾಷೆಗಳ ಒಗ್ಗೂಡುವಿಕೆಯ ಫಲವೇ ಅಖಂಡ ಕನ್ನಡ:  

ಕರ್ನಾಟಕವೊಂದರಲ್ಲಿಯೇ ಸುಮಾರು 176 ಉಪಭಾಷೆಗಳಿದ್ದವು. ಕುಂದಾಪುರ ಕನ್ನಡ, ಹವ್ಯಕ ಕನ್ನಡ, ಸುಳ್ಯ ಕನ್ನಡ, ಬ್ಯಾರಿ ಕನ್ನಡ, ತುಳು, ಶಿವಳ್ಳಿ ತುಳು, ಮರಾಠಿ ಮಿಶ್ರಿತ ಕನ್ನಡ ಇತ್ಯಾದಿ ಇಷ್ಟೂ ಭಾಷೆಗಳ ಒಗ್ಗೂಡುವಿಕೆಯ ಫಲವೇ ಅಖಂಡ ಕನ್ನಡ. ಆದರೆ, ಕನ್ನಡ ಅಧಿಕೃತ ಭಾಷೆಯಾದ ನಂತರ ಇಲ್ಲಿನ ಉಪಭಾಷೆಗಳು ಕಡೆಗಣಿಸಲ್ಪಟ್ಟವು. ಭಾಷೆಗಳು ಬೆಳೆಯುವುದು ಇತರ ಭಾಷೆಗಳನ್ನು ಹೀರಿಕೊಳ್ಳುವುದರಿಂದಲೇ ಹೊರತು ನಿರಾಕರಿಸುವುದರಿಂದ ಅಲ್ಲ ಎಂದ ಪ್ರೊ. ತುಕಾರಾಮ ಪೂಜಾರಿ ಅವರು, ಎಲ್ಲ ಭಾಷೆಗಳ ಸತ್ವವನ್ನು ಹೀರಬೇಕು ಎಂದರು.  

ಯಕ್ಷಗಾನ ನಾಟಕಗಳ ಮೂಲ:

ತುಳು ಮಾತೃಭಾಷೆ ಲೋಕವನ್ನು ಗ್ರಹಿಸಿದ ಭಾಷೆ ಕನ್ನಡ. ಭಾರತದ ಪಾರಂಪರಿಕ ಮಹಾ ಕಥನಗಳಾದ ರಾಮಾಯಣ, ಮಹಾಭಾರತವನ್ನು ನಾನು ಕೇಳಿದ್ದು, ಅರಗಿಸಿಕೊಂಡದ್ದು ಹಳ್ಳಿಗಳಲ್ಲಿ ಆಗೀಗ ನಡೆಯುವ ತಾಳಮದ್ದಳೆ ಕೂಟ, ಯಕ್ಷಗಾನ, ನಾಟಕಗಳ ಮೂಲಕವೇ ಆಗಿದೆ. ಔಪಚಾರಿಕವಾದ ಶಿಕ್ಷಣವನ್ನು ಮೊದಲು ಪಡೆದದ್ದು, ಕನ್ನಡದ ಮೂಲಕವೇ. ಹಾಗಾಗಿ ನಮಗೆ ಕನ್ನಡವೇ ವಿಶ್ವವನ್ನ ತೋರಿಸಿದ ಮೊದಲ ಕೈಗನ್ನಡಿ. ಕನ್ನಡವು ಕೇವಲ ಭಾಷೆಯಾಗಿರದೆ ಅದೊಂದು ವಿಶ್ವವನ್ನು ಮೊದಲು ತೋರಿಸಿದ ಕನ್ನಡಿ ಎಂದರು.

ಸಾಹಿತ್ಯ ಲೋಕಕ್ಕೆ ಬಂಟ್ವಾಳದ ಕೊಡುಗೆ:

ಬಂಟ್ವಾಳದ ಸಾಹಿತ್ಯಿಕ ಸಾಂಸ್ಕೃತಿಕ ಸಾಧನೆಯನ್ನು ವಿಶ್ಲೇಷಿಸುವುದು ಅಷ್ಟು ಸುಲಭದ ಮಾತಲ್ಲ. ಬಂಟ್ವಾಳದ ಸಾಹಿತ್ಯ ಪರಂಪರೆ ನಾಲ್ಕು ಧಾರೆಯಲ್ಲಿ  ಮುಂದುವರಿಯುವುದನ್ನು ಕಾಣುತ್ತೇವೆ. ಒಂದು ಸಾಹಿತ್ಯಿಕ ನೆಲೆ, ಎರಡು ಶಾಸ್ತ್ರ ಸಾಹಿತ್ಯ ಪರಂಪರೆ, ಮೂರು ಜಾನಪದ ಸಂಶೋಧನೆ ಮತ್ತು ನಾಲ್ಕು ಸಂಘಟನಾ ಪರಂಪರೆ. ಹೀಗೆ ಅಧ್ಯಯನಕ್ಕನುಗುಣವಾಗಿ ನಾಲ್ಕು ವಿಭಾಗದಲ್ಲಿ ಗುರುತಿಸಬಹುದು. ಪಂಜೆ ಮಂಗೇಶರಾಯರು, ಕಡೆಂಗೊಡ್ಲು ಶಂಕರಭಟ್ಟರಂತಹವರು ಸಾಹಿತ್ಯ ಪರಂಪರೆಯನ್ನು ಬೆಳೆಸಿದರೆ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್ಟ, ನೀರ್ಪಾಜೆ ಭೀಮ ಭಟ್ಟರಂತವರು ಶಾಸ್ತ್ರ ಸಾಹಿತ್ಯಕ್ಕೆ ಬುನಾದಿಯನ್ನು ಹಾಕಿದವರು.

ಪ್ರೊ ಬಿ.ಎ ವಿವೇಕ ರೈ, ಡಾ.ಚಿನ್ನಪ್ಪಗೌಡ, ವಾಮನ ನಂದಾವರ ಮೊದಲಾದವರು ತುಳು ಜಾನಪದ ಸಂಶೋಧನಾ ಸಾಹಿತ್ಯವನ್ನು ಬೆಳೆಸಿದವರು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಸಾಹಿತ್ಯ ಇನ್ನಷ್ಟು ಹಸನಾಗಲು ಆರೋಗ್ಯಕರ ಪರಂಪರೆ ಮುಂದುವರಿಯಲು ಸಂಘಟನೆಯ ಅಗತ್ಯವಿದ್ದು, ಈ ಪರಂಪರೆಗೆ ಹಿರಿಯ ಸಾಹಿತಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವರ ಕೊಡುಗೆ ಅನನ್ಯವಾದುದು ಎಂದು ಹೇಳಿದರು.

ಆಳ್ವರು ನಾಡಿನ ಹದಿನೈದು ಹೆಸರಾಂತ ಸಾಹಿತಿಗಳ ಶತಮಾನೋತ್ಸವ ಆಚರಿಸಿ ದಾಖಲೆ ನಿರ್ಮಿಸಿದವರು. ಆಳ್ವರ ಸಾರಥ್ಯದಲ್ಲಿ ಮೋಹನ ರಾವ್ ಆದಿಯಾಗಿ ಪರಿಷತ್‍ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆ ಕುರಿತಂತೆ ಬಂಟ್ವಾಳಕ್ಕೊಂದು ವಿಶಿಷ್ಟ ಸ್ಥಾನವಿದೆ. ಗಣಪತಿ ರಾವ್ ಐಗಳ್, ಬಿ.ಎ ಸಾಲೆತ್ತೂರ್‍ರಂತಹ ಇತಿಹಾಸಕಾರರನ್ನು, ಬಿ.ವಿ ಕಾರಂತರಂತಹ ರಂಗಕರ್ಮಿಗಳನ್ನು ಅಲ್ಲದೆ ಯಕ್ಷಗಾನ ಕ್ಷೇತ್ರದ ಅನೇಕ ದಿಗ್ಗಜರನ್ನು ಪಡೆದ ಹೆಗ್ಗಳಿಕೆ ಬಂಟ್ವಾಳದ್ದು. ಅದ್ಭುತವಾದ ಜಾನಪದ ಹಿನ್ನೆಲೆಯನ್ನು ಪಡೆದಿರುವ ಬಂಟ್ವಾಳ ಪ್ರಾಚೀನ ದಿನದಿಂದಲೇ ತನ್ನ ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾದ ಕೇಂದ್ರ. ಆದರೆ, ಇಲ್ಲಿಯ ಜನ ಕೇವಲ ವ್ಯಾಪಾರಿ ಮನೋಭಾವದವರೆನ್ನುವ ಆಪಾದನೆಯನ್ನು ಮೀರಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಮುನ್ನಡೆಯುತ್ತಿದೆ ಎಂದು ಹೇಳ ಬಯಸುತ್ತೇನೆ. ಇದಕ್ಕೆ ಉದಾಹರಣೆಯಾಗಿ ಈಗಿನ ತಲೆಮಾರಿನಲ್ಲಿ ಅಜಕ್ಕಳ ಗಿರೀಶ್ ಭಟ್, ಧರಣಿ ದೇವಿ ಮಾಲಗತ್ತಿ, ನಾಗವೇಣಿ ಮಂಚಿ, ರಾಧೇಶ ತೋಳ್ಪಾಡಿ, ಸುರೇಶ್ ಬಾಳಿಗರಂತಹ ಯುವ ತಲೆಮಾರಿನವರ ಸಾಹಿತ್ಯ ಕೃಷಿ ನಾವು ಹೆಮ್ಮೆಪಡುವ ರೀತಿಯಲ್ಲಿ ಸಾಗುತ್ತಿದೆ. ಕನ್ನಡ ಸಾರಸ್ವತ ಲೋಕಕ್ಕೆ ಇವರುಗಳ ಕೊಡುಗೆ ಅಪಾರ ಎಂದರು.

ಸಮ್ಮೇಳನಕ್ಕೆ ಚಾಲನೆ

ಶುಕ್ರವಾರ ಬೆಳಗ್ಗೆ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಅವರು ರಾಷ್ಟ್ರಧ್ವಜ, ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕುರ ಅವರು ಪರಿಷತ್ ಧ್ವಜ ಹಾಗೂ ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಕನ್ನಡದ ಧ್ವಜಾರೋಹಣ ನೆರವೇರಿಸಿದರು. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top