ಜ.13ರಂದು ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಚಲನಚಿತ್ರ ಸಂಭ್ರಮಾಚರಣೆ
ಮಂಗಳೂರು, ಜ.11: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕನ್ನಡ ಚಲನಚಿತ್ರದ 125ನೇ ದಿನದ ಸಂಭ್ರಮಾಚರಣೆ ಶಾಲಾ ವಾರ್ಷಿಕೋತ್ಸವ ಹೆಸರಿನಲ್ಲಿ ಜ.13ರಂದು ಭಾನುವಾರ ಸಾಯಂಕಾಲ 5.30ಕ್ಕೆ ನಗರ ಹೊರವಲಯದ ಅಡ್ಯಾರ್ ಗಾರ್ಡನ್ನಲ್ಲಿ ಆಯೋಜಿಸಲಾಗಿದೆ.
ಕಲರ್ಸ್ ಕನ್ನಡ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ನಟ ಪ್ರಜ್ವಲ್ ದೇವರಾಜ್, ರಾಗಣಿ ದ್ವಿವೇದಿ, ಪ್ರಣೀತಾ ಸುಭಾಷ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರದ ನಟರಿಂದ ಕಾಮಿಡಿ ಕಾರ್ಯಕ್ರಮಗಳು, ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಅಭಿನಂದನೆ, ಚಿತ್ರದ ಜರ್ನಿಯ ಕುರಿತು ಜನರೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಮುಡಿಪು ಶಾಲೆಗೆ ಮೂಲಸೌಕರ್ಯ
ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ದತ್ತು ತೆಗೆದುಕೊಂಡಿರುವ ಮುಡಿಪು ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ. ಸಣ್ಣ ಪುಟ್ಟ ರಿಪೇರಿ ಕೆಲಸಗಳನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಕ್ಲಾಸ್, ಪ್ರೀ ಸ್ಕೂಲ್ ತರಗತಿಗಳನ್ನು ಆರಂಭಿಸುವುದು, ಮಕ್ಕಳಿಗೆ ಇಂಗ್ಲಿಷ್ ಭಾಷೆ ಮಾತನಾಡಲು ಕಲಿಸುವ ನಿಟ್ಟಿನಲ್ಲಿ ಪ್ರತ್ಯೇಕ ಇಂಗ್ಲಿಷ್ ಭಾಷಾ ಶಿಕ್ಷಕಿಯ ನೇಮಕಾತಿ ಮಾಡಲು ನಿರ್ಧರಿಸಲಾಗಿದೆ. ಹೊಸ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಶಾಲೆಯಲ್ಲಿ ಪ್ರಸ್ತುತ 25 ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಇನ್ನಿಬ್ಬರು ಶಿಕ್ಷಕರನ್ನು ನೇಮಿಸಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ ಎಂದರು.
ಬಾಲನಟರಾದ ರಂಜನ್ ಸಾಹು, ಸಂಪತ್, ಸಪ್ತಾ ಪಾವೂರು, ಸಹ ನಿರ್ಮಾಪಕ ರವಿ ರೈ ಉಪಸ್ಥಿತರಿದ್ದರು.