ಅತ್ತೆಯ ಸಾವನ್ನು ಸಂಭ್ರಮಿಸಿದ ಪತ್ನಿಯನ್ನು ಬಾಲ್ಕನಿಯಿಂದ ತಳ್ಳಿ ಕೊಂದ ಪತಿ
ಕೊಲ್ಹಾಪುರ: ಅತ್ತೆಯ ಸಾವನ್ನು ಸಂಭ್ರಮಿಸಿದ ಪತ್ನಿಯನ್ನು ಪತಿ ಎರಡನೇ ಅಂತಸ್ತಿನ ಬಾಲ್ಕನಿಯಿಂದ ಕೆಳಕ್ಕೆ ದೂಡಿ ಸಾಯಿಸಿದ ಆಘಾತಕಾರಿ ಘಟನೆ ನಗರದಿಂದ ವರದಿಯಾಗಿದೆ.
ಮೃತ ಮಹಿಳೆಯನ್ನು ಶುಭಾಂಗಿ ಲೋಖಂಡೆ (35) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಆಕೆ ಅತ್ತೆಯ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳೆಂದೇ ಭಾವಿಸಲಾಗಿತ್ತು. ಆದರೆ ಸಂಶಯಗೊಂಡ ಪೊಲೀಸರು ಆಕೆಯ ಪತಿ ಸಂದೀಪ್ ನನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿದ್ದಿತ್ತು.
ಸಂದೀಪ್ನ ಅಸೌಖ್ಯಪೀಡಿತ ತಾಯಿ ಮಾಲತಿ (70) ಶನಿವಾರ ಬೆಳಿಗ್ಗೆ ನಿಧನರಾಗಿದ್ದರು. ಇದರಿಂದ ಅತೀವ ಖುಷಿ ಪಟ್ಟ ಶುಭಾಂಗಿಗೆ ತನ್ನ ಭಾವನೆಗಳನ್ನು ಅದುಮಿಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರಿಂದ ಸಂದೀಪ್ ತುಂಬಾ ಸಿಟ್ಟುಕೊಂಡು ಈ ಕೃತ್ಯವೆಸಗಿದ್ದಾನೆಂದು ಎಂದು ಪೋಲೀಸರು ತಿಳಿಸಿದ್ದಾರೆ.
ಅವರ ನಿವಾಸ ಕೊಲ್ಕಾಪುರದ ಆಪ್ಟೆನಗರ್ ಉಪನಗರಿಯಲ್ಲಿದೆ. ದಂಪತಿಯ ಇಬ್ಬರು ಮಕ್ಕಳು ಈಗ ಸಂದೀಪ್ ತಂದೆಯ ಆರೈಕೆಯಲ್ಲಿದ್ದಾರೆ.
Next Story