ಬಜಾಲ್: ಮಗು ಸಹಿತ ಯುವತಿ ನಾಪತ್ತೆ
ಮಂಗಳೂರು, ಜು.19: ನಗರ ಸಮೀಪದ ಬಜಾಲ್ನ ಮಗು ಸಹಿತ ವಿವಾಹಿತೆ ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಜಾಲ್ ಚರ್ಚ್ ಸಮೀಪದ ನಿವಾಸಿ ರಿಝ್ವಾನ್ ಎಂಬವರ ಪತ್ನಿ ಸಾಜೀದಾ(25), ಮಗು ಸೆಹಾರಾನ್ (2 ವರ್ಷ)ನಾಪತ್ತೆಯಾದವರು ಎಂದು ತಿಳಿದುಬಂದಿದೆ.
ಘಟನೆ ವಿವರ: ಯುವತಿಯು ಪತಿ, ಅತ್ತೆಯ ಜೊತೆ ಬಜಾಲ್ ಚರ್ಚ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಾಪತ್ತೆಯಾದ ಸಾಜೀದಾ ಅವರನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ ವಳಚ್ಚಿಲ್ನ ಕರೀಂ ಎಂಬವರ ಪುತ್ರ ರಿಝ್ವಾನ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಬಳಿಕ ಬಜಾಲ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.
ಜು.17ರಂದು ಬೆಳಗ್ಗೆ ಸಾಜೀದಾ ಅವರ ಅತ್ತೆ ಮಂಗಳೂರಿಗೆ ಕರೆಂಟ್ ಬಿಲ್ ಪಾವತಿಸಲು ತೆರಳಿದ್ದಾರೆ. ಸಂಜೆ 4 ಗಂಟೆಗೆ ಅತ್ತೆಯು ಮನೆಗೆ ವಾಪಸಾಗುವ ವೇಳೆ ಸೊಸೆ ಸಾಜೀದಾ ಮತ್ತು ಆಕೆಯ ಪುತ್ರ ಸೆಹರಾನ್ ಮನೆಯಿಂದ ನಾಪತ್ತೆಯಾಗಿದ್ದಾರೆ. ಸಾಜೀದಾ ಮನೆಯಿಂದ ಹೋಗುವ ಸಮಯ ಬಟ್ಟೆ-ಬರೆ, ಕಾಲುಗೆಜ್ಜೆ, ಕಿವಿಯೋಲೆ ಮತ್ತು ಉಂಗುರವೊಂದನ್ನು ತೆಗೆದುಕೊಂಡು ಹೋಗಿದ್ದಾರೆ. ಯುವತಿಯ ಪತ್ತೆಗಾಗಿ ಸಂಬಂಧಿಕರಲ್ಲಿ ಹಾಗೂ ನೆರೆಹೊರೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಹರೆ: 5.3 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಉದ್ದ ಕೂಡಲು ಹೊಂದಿದ್ದಾರೆ. ಯುವತಿ ಮನೆಯಿಂದ ಹೋಗುವಾಗ ಬುರ್ಖಾ ಧರಿಸಿದ್ದರು. ಬ್ಯಾರಿ, ಕನ್ನಡ, ತುಳು ಮಾತನಾಡುತ್ತಾರೆ.
ನಾಪತ್ತೆಯಾದ ಯುವತಿಯ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಕಂಕನಾಡಿ ನಗರ ಠಾಣೆ (0824-2220529)ನ್ನು ಸಂಪರ್ಕಿಸಬಹುದು. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.